ಮುಂಬೈ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹಾಗೂ ಅವರ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಹೊಗಳುವ ಬಾಲಿವುಡ್ ನಟರಾದ ವಿವೇಕ್ ಒಬೆರಾಯ್ ಮತ್ತು ಆರ್. ಮಾಧವನ್ ಅವರ ವಿದೇಶ ವಾಸ್ತವ್ಯದ ಬಗ್ಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಅಧ್ಯಕ್ಷ ರಾಜ್ ಠಾಕ್ರೆ ಪ್ರಶ್ನೆಯೆತ್ತಿದ್ದಾರೆ. “ಭಾರತದಲ್ಲಿ ಎಲ್ಲವೂ ಅಷ್ಟೊಂದು ಚೆನ್ನಾಗಿದ್ದರೆ ಮತ್ತು ಮೋದಿ ದೇಶವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂಬ ನಂಬಿಕೆ ನಿಮಗಿದ್ದರೆ, ನೀವೇಕೆ ವಿದೇಶದಲ್ಲಿ ನೆಲೆಸಿದ್ದೀರಿ?” ಎಂದು ಠಾಕ್ರೆ ಖಾರವಾಗಿ ಪ್ರಶ್ನಿಸಿದ್ದಾರೆ.
‘ಧುರಂಧರ್’ ಚಿತ್ರದಲ್ಲಿ ನಟನೆ, ವಾಸ ಮಾತ್ರ ದುಬೈನಲ್ಲಿ!
ಮುಂಬೈನಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹಾರಾಷ್ಟ್ರ ನವನಿರ್ಮಾಣ ವಿದ್ಯಾರ್ಥಿ ಸೇನೆಯ 20ನೇ ವರ್ಧಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ ಠಾಕ್ರೆ, ದೇಶದಲ್ಲಿ ಉದ್ಯಮ ಸ್ನೇಹಿ ವಾತಾವರಣವಿಲ್ಲದೆ ಸಾವಿರಾರು ಉದ್ಯಮಿಗಳು ಮೂಟೆ ಕಟ್ಟಿ ಹೊರದೇಶಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಬಾಲಿವುಡ್ ನಟರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, “ಪ್ರಧಾನಿ ಮೋದಿ ಅವರ ಜೀವನಚರಿತ್ರೆ ಆಧರಿಸಿದ ಚಿತ್ರದಲ್ಲಿ ನಟಿಸಿದ್ದ ವಿವೇಕ್ ಒಬೆರಾಯ್ ಈಗ ದುಬೈನಲ್ಲಿ ವಾಸಿಸುತ್ತಿದ್ದಾರೆ. ಮೋದಿ ಸರ್ಕಾರವನ್ನು ಬಹಿರಂಗವಾಗಿ ಹೊಗಳುವ ಆರ್. ಮಾಧವನ್ ಕೂಡ ದುಬೈನಲ್ಲೇ ನೆಲೆಸಿದ್ದಾರೆ. ದೇಶವನ್ನು ಮತ್ತು ಪ್ರಧಾನಿಯನ್ನು ಇಷ್ಟೊಂದು ಪ್ರೀತಿಸುವ ಇವರು ತಮ್ಮ ಕುಟುಂಬ ಸಮೇತ ವಿದೇಶದಲ್ಲಿ ಏತಕ್ಕಾಗಿ ವಾಸಿಸುತ್ತಿದ್ದಾರೆ? ಇವರೆಲ್ಲ ಇಲ್ಲಿಗೆ ಬಂದು ‘ಧುರಂಧರ್’ನಂತಹ ಸರ್ಕಾರಿ ಪ್ರಾಯೋಜಿತ ಸಿನಿಮಾಗಳಲ್ಲಿ ನಟಿಸಿ, ಹಣ ಗಳಿಸಿ ಮತ್ತೆ ದುಬೈಗೆ ಹೊರಟುಹೋಗುತ್ತಾರೆ” ಎಂದು ಲೇವಡಿ ಮಾಡಿದರು.
ಈ ಹಿಂದೆ ಇಂಥದ್ದೇ ಪ್ರಶ್ನೆ ಬಂದಾಗ ಖಾಸಗಿ ಕಾರಣಗಳಿಗಾಗಿ ದುಬೈನಲ್ಲಿ ವಾಸಿಸುತ್ತಿರುವುದಾಗಿ ಈ ನಟರು ಸ್ಪಷ್ಟನೆ ನೀಡಿದ್ದರು. ಕೋವಿಡ್ ಸಮಯದಿಂದ ತಮ್ಮ ಮಗನ ಈಜು ಕಲಿಕೆಯ ತರಬೇತಿಗಾಗಿ ದುಬೈಗೆ ತೆರಳಿರುವುದಾಗಿ ಮಾಧವನ್ ಹೇಳಿದ್ದರೆ, ಉದ್ಯಮದ ನಿಮಿತ್ತ ಅಲ್ಲಿಗೆ ತೆರಳಿರುವುದಾಗಿ ವಿವೇಕ್ ಒಬೆರಾಯ್ ತಿಳಿಸಿದ್ದರು.
ಟ್ರೋಲ್ ಸಂಸ್ಕೃತಿಗೆ ಆಕ್ಷೇಪ
ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಬಳಕೆಯಾದ ಭಾಷೆಯನ್ನು ರಾಜ್ ಠಾಕ್ರೆ ಖಂಡಿಸಿದರು. “ದಾರಿ ತಪ್ಪಿದ ಮಕ್ಕಳನ್ನು ಕ್ಷಮಿಸಿ ಸರಿದಾರಿಗೆ ತರಬೇಕು” ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಬೆಂಬಲಿಸಿದ ಠಾಕ್ರೆ, “ಪ್ರಧಾನಿ ಹುದ್ದೆಯಲ್ಲಿದ್ದವರ ವಿರುದ್ಧ ಅಷ್ಟು ಕೆಳಮಟ್ಟದ ಭಾಷೆ ಬಳಸುವುದು ಸರಿಯಲ್ಲ. ಆದರೆ, ಮೋದಿ ಅವರು ಈ ಮಾತನ್ನು ಮೊದಲು ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಹೇಳಬೇಕು” ಎಂದೂ ತಿರುಗೇಟು ನೀಡಿದರು.
ಬಿಜೆಪಿಯ ಸಾಮಾಜಿಕ ಜಾಲತಾಣ ಟ್ರೋಲ್ ಪಡೆಗಳನ್ನು ಟೀಕಿಸಿದ ಅವರು, “ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರಿಂದ ಹಿಡಿದು ಠಾಕ್ರೆ ಕುಟುಂಬದವರೆಗೂ ಎಲ್ಲ ಮಹನೀಯರನ್ನು ಬಿಜೆಪಿಯ ಟ್ರೋಲ್ ತಂಡಗಳು ಗುರಿಮಾಡುತ್ತವೆ. ಈ ಟ್ರೋಲ್ ಸಂಸ್ಕೃತಿಯನ್ನು ಅವರೇ ಹುಟ್ಟುಹಾಕಿದ್ದು, ‘ತಾವು ಬೆಳೆದ ಫಸಲನ್ನು ಅವರು ಈಗ ಉಣ್ಣುತ್ತಿದ್ದಾರೆ’. ಪ್ರತಿಯೊಬ್ಬರಿಗೂ ಗೌರವವಿದೆ ಮತ್ತು ಯಾರ ತಾಯಂದಿರನ್ನೂ ನಿಂದಿಸಬಾರದು” ಎಂದು ಹೇಳಿದರು.
ಇದೇ ವೇಳೆ, ದೇಶಾದ್ಯಂತ ಸದ್ದು ಮಾಡಿದ್ದ ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಹುದುಗಿದ್ದ ದೀರ್ಘಕಾಲದ ಆಕ್ರೋಶ ಹೊರಬರಲು ಪ್ರಮುಖ ಕಾರಣವಾಯಿತು ಎಂದೂ ಠಾಕ್ರೆ ವಿಶ್ಲೇಷಿಸಿದರು.
ಇದನ್ನೂ ಓದಿ : ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 3 ವರ್ಷದ ಕಂದಮ್ಮ ಸಾವು!


















