ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಮುಂದೆ ಕೇವಲ ದಂಡ ವಿಧಿಸುವುದಷ್ಟೇ ಅಲ್ಲ, ನಿಯಮ ಉಲ್ಲಂಘಿಸಿದವರ ವಿರುದ್ಧ ನೇರವಾಗಿ ಎಫ್‌ಐಆರ್ ದಾಖಲಿಸಲಾಗುತ್ತದೆ. ಈಗಾಗಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿರುವ ಅಧಿಕಾರಿಗಳು, ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಹೌದು.. ನಗರದ ಬಾಣಸವಾಡಿಯ 7ನೇ ಮುಖ್ಯರಸ್ತೆಯಲ್ಲಿ ಸೌಂದರ್ಯೀಕರಣಗೊಂಡಿದ್ದ ಸ್ಥಳದಲ್ಲೇ ಮತ್ತೆ ಕಸ ಎಸೆದ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುತ್ತಿದ್ದ ನಾಲ್ವರ ಕೃತ್ಯ ವಾರ್ಡ್ ಮಾರ್ಷಲ್‌ಗಳ ಕಣ್ಣಿಗೆ ಬಿದ್ದಿದ್ದು, ದಂಡ ಪಾವತಿಸುವಂತೆ ಸೂಚಿಸಿದರೂ ದಂಡ ಪಾವತಿಸಲು ನಿರಾಕರಿಸಿ ಕಸವನ್ನು ಬಿಸಾಡಿ ತೆರಳಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆ ಸಹಾಯಕ ಪ್ರಧಾನ ವ್ಯವಸ್ಥಾಪಕರ ದೂರಿನ ಮೇರೆಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ BNS-2023ರ ಕಲಂ 280ರಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ದಂಡದ ಜೊತೆಗೆ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ಕಸದ ಬ್ಲಾಕ್‌ಸ್ಪಾಟ್‌ಗಳು ಮತ್ತೆ ಮರುಕಳಿಸದಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ಅಡ್ಡಿಯಾದರೆ ದಂಡ ಹಾಗೂ ಎಫ್‌ಐಆರ್ ಅನಿವಾರ್ಯ ಎಂದು ಪಾಲಿಕೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ ; ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ನಂದನ್ ನೀಲೆಕಣಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ; ಪ್ರಧಾನಿ ಮೋದಿ ಘೋಷಣೆ!


















