ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧ ಈಗ ಹಲವು ದೇಶಗಳಿಗೆ ವ್ಯಾಪಿಸುತ್ತಿದ್ದು, ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಸಂಸ್ಥೆಯಾದ ‘ಅರಾಮ್ಕೊ‘ (Aramco) ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಕೆಂಪು ಸಮುದ್ರದ ಕರಾವಳಿಯಲ್ಲಿರುವ ಜಿಜಾನ್ ಮತ್ತು ಯಾನ್‌ಬು ಪ್ರದೇಶಗಳಲ್ಲಿರುವ ತೈಲ ಸಂಸ್ಕರಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದ್ದು, ಜಿಜಾನ್‌ನ ತೈಲ ಘಟಕದಿಂದ ಬೃಹತ್ ಪ್ರಮಾಣದ ಹೊಗೆ ಏಳುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಯಾನ್‌ಬು ಪ್ರದೇಶದತ್ತ ಬಂದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸೌದಿಯ ಕ್ಷಿಪಣಿ ನಿಗ್ರಹ ವ್ಯವಸ್ಥೆಯು ಯಶಸ್ವಿಯಾಗಿ ಹೊಡೆದುರುಳಿಸಿದೆ.
2 ವಾರಗಳ ಬಳಿಕ ಇರಾನ್ ಮೇಲೆ ದಾಳಿ ನಿಲ್ಲಿಸಿದ ಅಮೆರಿಕ
ಸತತ 13 ರಾತ್ರಿಗಳ ಕಾಲ ಇರಾನ್ ಮೇಲೆ ಸರಣಿ ವಾಯುದಾಳಿ ನಡೆಸಿದ್ದ ಅಮೆರಿಕ, ಇದೇ ಮೊದಲ ಬಾರಿಗೆ ತನ್ನ ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ರಾಜತಾಂತ್ರಿಕ ಮಾತುಕತೆಗೆ ಆದ್ಯತೆ ನೀಡುವ ಉದ್ದೇಶದಿಂದ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಜಾಗತಿಕ ಇಂಧನ ಪೂರೈಕೆ, ಆರ್ಥಿಕತೆಯ ಮೇಲಾಗುವ ಪರಿಣಾಮ ಹಾಗೂ ತಮ್ಮ ಶಸ್ತ್ರಾಸ್ತ್ರ ಸಂಗ್ರಹ ಕಡಿಮೆಯಾಗುತ್ತಿರುವ ಬಗ್ಗೆ ಅಮೆರಿಕ ಆಡಳಿತ ಮಂಡಳಿ ಕಳವಳ ವ್ಯಕ್ತಪಡಿಸಿದ್ದು, ಇರಾನ್ ಗಂಭೀರವಾಗಿ ಮಾತುಕತೆಗೆ ಬರಬೇಕೆಂದು ಆಗ್ರಹಿಸಿದೆ.
ಇರಾನ್ ಹಡಗಿನ ಮೇಲೆ ದಾಳಿ
ಇತ್ತ ಕ್ಯಾಸ್ಪಿಯನ್ ಸಮುದ್ರದಲ್ಲಿ ತಮ್ಮ ವಾಣಿಜ್ಯ ಹಡಗಿನ ಮೇಲೆ ಉಕ್ರೇನ್ ಪಡೆಗಳು ದಾಳಿ ನಡೆಸಿವೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಗಂಭೀರ ಆರೋಪ ಮಾಡಿದೆ. ಈ ಸ್ಫೋಟದಲ್ಲಿ ಓರ್ವ ನಾವಿಕ ಮೃತಪಟ್ಟು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿದ್ದು, ಇರಾನ್‌ನಲ್ಲಿದ್ದ ಉಕ್ರೇನ್ ರಾಯಭಾರಿಗೆ ಸಮನ್ಸ್ ಜಾರಿಗೊಳಿಸಿ ಕಠಿಣ ಪ್ರತಿಭಟನೆ ದಾಖಲಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಲು ರಷ್ಯಾ ಉಪಗ್ರಹ ಮಾಹಿತಿಯನ್ನು ಒದಗಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಜಾಗತಿಕ ಯುದ್ಧದ ಕಾವು ಮತ್ತಷ್ಟು ಹೆಚ್ಚಾಗಿದೆ.
ಯೆಮೆನ್‌ನಲ್ಲೂ ತೀವ್ರಗೊಂಡ ಸಮರ
ಹೌತಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಹಡಗುಗಳು ಹಾಗೂ ಸಂಸ್ಕರಣಾಗಾರಗಳ ಮೇಲೆ ದಾಳಿ ತೀವ್ರಗೊಳಿಸುತ್ತಿದ್ದಂತೆ, ಸೌದಿ ನೇತೃತ್ವದ ಮೈತ್ರಿಕೂಟ ಯೆಮೆನ್‌ನ ಹೊದೈದಾ, ಮಾರಿಬ್ ಹಾಗೂ ಅಲ್-ಜೌಫ್ ಪ್ರಾಂತ್ಯಗಳಲ್ಲಿರುವ ಹೌತಿ ಶಸ್ತ್ರಾಸ್ತ್ರ ಗೋದಾಮುಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. 2022ರಿಂದ ಯೆಮೆನ್‌ನಲ್ಲಿ ಜಾರಿಯಲ್ಲಿದ್ದ ಕದನ ವಿರಾಮ ಒಪ್ಪಂದವು ಪ್ರಸ್ತುತ ಮುರಿದುಬಿದ್ದಿದ್ದು, ಯೆಮೆನ್ ಅಂತರ್ಯುದ್ಧ ಮತ್ತೆ ಭುಗಿಲೇಳುವ ಲಕ್ಷಣಗಳು ಕಾಣಿಸುತ್ತಿವೆ. ಹೊರ್ಮುಜ್‌ನಂತಹ ಪ್ರಮುಖ ನೌಕಾ ಮಾರ್ಗಗಳಲ್ಲಿ ಇಂಧನ ಪೂರೈಕೆ ವ್ಯತ್ಯಯಗೊಂಡಿದ್ದು, ಇಡೀ ಜಗತ್ತು ತೈಲ ಬಿಕ್ಕಟ್ಟಿನ ಭೀತಿಗೆ ಸಿಲುಕಿದೆ.
ಇದನ್ನೂ ಓದಿ : 2028ಕ್ಕೆ ಸ್ಪರ್ಧೆ ಮಾಡಲ್ಲ ; ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯ



















