ಬೆಂಗಳೂರು : ನಗರದ ವಿವಿಪುರಂ ಪೊಲೀಸರ ಸಮಯಪ್ರಜ್ಞೆಯಿಂದ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಖದೀಮನೊಬ್ಬ ಸಿಕ್ಕಿಬಿದ್ದಿದ್ದಾನೆ. ಉಂಡ ಮನೆಗೆ ಕನ್ನ ಹಾಕಿದ್ದ ಆರೋಪಿ, ತನ್ನನ್ನು ನಂಬಿದ್ದ ವೃದ್ಧೆಯ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬಂಧಿತ ಆರೋಪಿಯನ್ನು ಗೌತಮ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಆರೋಪಿ ಗೌತಮ್ ಬಿಸ್ವಾಸ್ ಬಾಣಸವಾಡಿ ನಿವಾಸಿ 60 ವರ್ಷದ ವೃದ್ಧೆಯ ಬಳಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ವೃದ್ಧೆಗೆ ಗೊತ್ತಾಗದಂತೆ ಚಿನ್ನಾಭರಣ ಕದ್ದು ಪರಾರಿಯಾಗಿದ್ದ.
ಕದ್ದ ಚಿನ್ನಾಭರಣವನ್ನು ಮಾರಾಟ ಮಾಡಲು ಗೌತಮ್ ಬಿಸ್ವಾಸ್ ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯತ್ನಿಸುತ್ತಿದ್ದ ವೇಳೆ, ಪೊಲೀಸರಿಗೆ ಆತನ ಮೇಲೆ ಅನುಮಾನ ಬಂದಿದೆ. ಕೂಡಲೇ ಗೌತಮ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚಿನ್ನಾಭರಣ ಕದ್ದಿರುವ ವಿಚಾರ ಬಯಲಾಗಿದೆ.
ಬಳಿಕ ಆರೋಪಿಯನ್ನು ಬಂಧಿಸಿರುವ ವಿವಿಪುರಂ ಪೊಲೀಸರು, ಆತನಿಂದ 4 ಲಕ್ಷ ರೂಪಾಯಿ ಮೌಲ್ಯದ 36 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಚಿನ್ನಾಭರಣದ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಬಳಿಕವೇ ಚಿನ್ನಾಭರಣ ಕಳ್ಳತನವಾಗಿರುವುದು ಮಾಲೀಕರಿಗೆ ಗೊತ್ತಾಗಿದೆ. ಈ ಸಂಬಂಧ ಮನೆ ಮಾಲೀಕ ಬಾಬು ಎಂಬುವವರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ನೀಟ್ ವಿವಾದ : ಬೆಂಗಳೂರಲ್ಲಿ ಭಾರೀ ಹೈಡ್ರಾಮಾ.. ಬಿಜೆಪಿ ಕಚೇರಿ ಮುತ್ತಿಗೆಗೆ ಕಾಂಗ್ರೆಸ್ ಯತ್ನ



















