ತುಮಕೂರು : ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ₹77 ಲಕ್ಷ ಲಂಚ ಬೇಡಿಕೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಅಬಕಾರಿ ಆಯುಕ್ತ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರುಗಳು ಆಡಿಯೋ ದಾಖಲೆಯಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ಸಮಗ್ರ ತನಿಖೆ ನಡೆಸಿ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದ್ದಾರೆ.
ದೂರಿನಲ್ಲಿ ತುಮಕೂರು ಅಬಕಾರಿ ಉಪ ಆಯುಕ್ತ ವೈ. ಭರತೇಶ್ ಹಾಗೂ ಹಾಲಿ ಅಬಕಾರಿ ಆಯುಕ್ತರ ವಿರುದ್ಧ ಸಾರ್ವಜನಿಕ ಹುದ್ದೆಯ ದುರುಪಯೋಗ, ಗಂಭೀರ ಭ್ರಷ್ಟಾಚಾರ, ಅಧಿಕಾರದ ದುರ್ಬಳಕೆ, ಸೇವಾ ನಡತೆ ಉಲ್ಲಂಘನೆ ಮತ್ತು ಆಡಳಿತಾತ್ಮಕ ಪ್ರಾಮಾಣಿಕತೆಗೆ ಧಕ್ಕೆ ಉಂಟುಮಾಡಿದ ಆರೋಪಗಳ ಕುರಿತು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಟ್ರಾಪ್ ಕಾರ್ಯಾಚರಣೆಯಲ್ಲಿ, ವೈನ್ ಟಾವೆರ್ನ್ (CL-7) ಪರವಾನಗಿ ನೀಡಲು ₹77 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದಾಗಿ ಹಾಗೂ ಅದರ ಮುಂಗಡವಾಗಿ ₹71.50 ಲಕ್ಷ ಸ್ವೀಕರಿಸುತ್ತಿದ್ದ ವೇಳೆ ಅಬಕಾರಿ ಉಪ ಆಯುಕ್ತ ವೈ. ಭರತೇಶ್ ಟ್ರಾಪ್‌ಗೆ ಸಿಕ್ಕಿಬಿದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕಾನೂನು ಕ್ರಮ ಮುಂದುವರಿದಿದೆ.
ದೂರಿನ ಪ್ರಕಾರ, ಜೆಟ್ಟಿ ಅಗ್ರಹಾರದ ನಾಗರಾಜು ಅವರು ಲೋಕಾಯುಕ್ತಕ್ಕೆ ಆಡಿಯೋ ದಾಖಲೆಯೊಂದಿಗೆ ದೂರು ಸಲ್ಲಿಸಿದ್ದಾರೆ. ಆ ಆಡಿಯೋದಲ್ಲಿ, “CL-7 ಮಾಡಿಸಬೇಕಾದರೆ ₹7.80 ಕೋಟಿ ನೀಡಬೇಕು. ಅದರಲ್ಲಿ ಹಿಂದಿನ ಅಬಕಾರಿ ಸಚಿವರಿಗೆ ಇಂತಿಷ್ಟು ಹಾಗೂ ಅಬಕಾರಿ ಆಯುಕ್ತರಿಗೆ ಇಂತಿಷ್ಟು ಹಣ ಕೊಡಬೇಕು” ಎಂದು ಭರತೇಶ್ ಹೇಳಿರುವುದಾಗಿ ಆರೋಪಿಸಲಾಗಿದೆ. ಈ ಆರೋಪಗಳು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಪಾತ್ರದ ಬಗ್ಗೆ ಗಂಭೀರ ಅನುಮಾನ ಮೂಡಿಸಿವೆ.
ಹೀಗಾಗಿ, ಹಾಲಿ ಅಬಕಾರಿ ಆಯುಕ್ತರು ಹುದ್ದೆಯಲ್ಲಿ ಮುಂದುವರಿದರೆ ತನಿಖೆಯ ಮೇಲೆ ಪ್ರಭಾವ ಬೀರುವ ಅಥವಾ ಸಾಕ್ಷ್ಯಾಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಉಲ್ಲೇಖಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಆಯುಕ್ತರನ್ನು ಕೂಡ ತಕ್ಷಣದಿಂದ ಅಮಾನತುಗೊಳಿಸಬೇಕು ಅಥವಾ ಯಾವುದೇ ಕಾರ್ಯನಿರ್ವಾಹಕ ಅಧಿಕಾರವಿಲ್ಲದ ಹುದ್ದೆಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು, ಈ ಪ್ರಕರಣ ಕೇವಲ ಒಬ್ಬ ಅಧಿಕಾರಿಯ ವಿರುದ್ಧದ ಆರೋಪವಲ್ಲ, ಅಬಕಾರಿ ಇಲಾಖೆಯ ಆಡಳಿತದ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ವಿಶ್ವಾಸಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ. ಲೋಕಾಯುಕ್ತ ವಶಪಡಿಸಿಕೊಂಡಿರುವ ಆಡಿಯೋ ದಾಖಲೆಯ ಸತ್ಯಾಸತ್ಯತೆ, ಹಣದ ಬೇಡಿಕೆಯ ಉದ್ದೇಶ ಹಾಗೂ ಹಿರಿಯ ಅಧಿಕಾರಿಗಳ ಪಾತ್ರದ ಕುರಿತು ಸಮಗ್ರ ತನಿಖೆ ಅಗತ್ಯವಿದೆ ಎಂದು ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
ಹಾಗೆಯೇ ವೈ. ಭರತೇಶ್ ವಿರುದ್ಧ ಈ ಹಿಂದೆಯೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆದಿರುವ ಮಾಹಿತಿಯೂ ಸಾರ್ವಜನಿಕ ವಲಯದಲ್ಲಿದೆ. ಇಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಅಧಿಕಾರಿಗಳು ಕಾರ್ಯನಿರ್ವಾಹಕ ಹುದ್ದೆಯಲ್ಲಿ ಮುಂದುವರಿಯುವುದರಿಂದ ಆಡಳಿತದ ಪಾರದರ್ಶಕತೆ ಮತ್ತು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆಯಾಗುತ್ತದೆ ಎಂದು ದಿನೇಶ್ ಕಲ್ಲಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗಕ್ಕೆ ಯಾವುದೇ ಸಹಿಷ್ಣುತೆ ಇರಬಾರದು ಎಂಬ ಸಂದೇಶವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ವೈ. ಭರತೇಶ್ ಹಾಗೂ ದೂರಿನಲ್ಲಿ ಹೆಸರು ಪ್ರಸ್ತಾಪವಾಗಿರುವ ಸಂಬಂಧಿತ ಅಧಿಕಾರಿಗಳ ವಿರುದ್ಧ ಸ್ವತಂತ್ರ ತನಿಖೆಗೆ ತಕ್ಷಣ ಆದೇಶಿಸಿ, ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸುವಂತೆ ದಿನೇಶ್ ಕಲ್ಲಹಳ್ಳಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ವಿರುದ್ಧ ರೈತರ ರಣಕಹಳೆ : ದೆಹಲಿಗೆ ಮುತ್ತಿಗೆ, ಶಂಭು ಗಡಿ ಸೀಲ್!


















