ಬೆಳಗಾವಿ : ಜಮೀನಿನ ಚೆಕ್ ಬಂದಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ನುಗ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಲಗಮಪ್ಪ ರಾಮಣ್ಣನವರ್ (32) ಮತ್ತು ಬಸಪ್ಪ ರಾಮಣ್ಣನವರ್ (38) ಕೊಲೆಯಾದವರು. ತಡರಾತ್ರಿ 9 ಜನರ ದುಷ್ಕರ್ಮಿಗಳು ಮನೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ, ಕುಟುಂಬಸ್ಥರ ಮೇಲೆ ಕ್ರೌರ್ಯ ಮೆರೆದಿದ್ದಾರೆ.ದುಷ್ಕರ್ಮಿಗಳ ದಾಳಿಯಲ್ಲಿ ಮನೆಯಲ್ಲಿ ಇದ್ದ ಬಾಲಕ, ಬಾಲಕಿ ಹಾಗೂ ವೃದ್ಧ ಸೇರಿ ಐವರು ಗಾಯಗೊಂಡಿದ್ದಾರೆ.
ಮನೆಯ ಹಿರಿಯ ಮಗ ಯಲ್ಲಪ್ಪನಿಗೆ ಸುಮಾರು 15 ವರ್ಷಗಳ ಹಿಂದೆ ಅನವ್ವಳೊಂದಿಗೆ ಮದುವೆಯಾಗಿತ್ತು. ಆದರೆ ಮದುವೆಯಾದ ಎಂಟು ತಿಂಗಳಲ್ಲೇ ಅನವ್ವ ತವರು ಮನೆ ಸೇರಿದ್ದಳು. ಬಳಿಕ ಅನವ್ವ ಹಾಗೂ ಆಕೆಯ ಕುಟುಂಬಸ್ಥರು ಮಗನಿಗೆ ಆಸ್ತಿಯಲ್ಲಿ ಪಾಲು ನೀಡುವಂತೆ ಬೇಡಿಕೆ ಇಟ್ಟಿದ್ದರು.
ಒಂಬತ್ತು ಎಕರೆ ಜಮೀನಿನಲ್ಲಿ ಒಂದು ಎಕರೆ ಜಾಗವನ್ನು ಯಲ್ಲಪ್ಪನ ತಂದೆ ಮಗನಿಗೆ ನೀಡಿದ್ದರು. ಇದೇ ಜಮೀನಿನ ಚೆಕ್ ಬಂದಿ ಹಾಕುವಂತೆ ಅನವ್ವಳ ತಂದೆ ಕರೆದಿದ್ದ ಎನ್ನಲಾಗಿದೆ. ಆದರೆ ಜಮೀನು ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಯಲ್ಲಪ್ಪನ ತಂದೆ ಹಾಗೂ ಸಹೋದರರು ಚೆಕ್ ಬಂದಿಗೆ ಹೋಗಿರಲಿಲ್ಲ. ಇದೇ ವಿಚಾರಕ್ಕೆ ಸಿಟ್ಟುಗೊಂಡ ಆರೋಪಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.
ಹತ್ಯೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಮನೆಯಲ್ಲಿ ಇದ್ದ 14 ವರ್ಷದ ಬಾಲಕಿ ಧೈರ್ಯದಿಂದ ಮಧ್ಯರಾತ್ರಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಸಹಾಯ ಕೋರಿದ್ದಾಳೆ. ಬಳಿಕ ತಮ್ಮನೊಂದಿಗೆ ಗಾಯಗೊಂಡ ದೊಡ್ಡಪ್ಪಂದಿರು ಹಾಗೂ ಅಜ್ಜನನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದ್ದಾಳೆ. ಆದರೆ ಲಗಮಪ್ಪ ಮತ್ತು ಬಸಪ್ಪ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಜೋಡಿ ಕೊಲೆ ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಅನವ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ : ಇರಾನ್‌ನ ಚಬಹಾರ್ ಬಂದರಿನ ಮೇಲೆ ಅಮೆರಿಕ ಭೀಕರ ದಾಳಿ : ಕುಸಿದುಬಿದ್ದ ಕಾವಲು ಗೋಪುರ!


















