ಚೆನ್ನೈ : ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ (TVK) ಪಕ್ಷದ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಸಮರ ಸಾರಿದ್ದಾರೆ. ಕರೂರ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ, ಲಂಚ ಪಡೆಯುವ ಅಥವಾ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಒಂದೇ ಒಂದು ವ್ಯಕ್ತಿಗೂ ಜಾಗವಿಲ್ಲ ಮತ್ತು ಅಂತಹ ಕೃತ್ಯಗಳನ್ನು ಮುಂದುವರಿಸಲು ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಲಂಚ ಕೇಳುವವರಿಗೆ ನೇರವಾಗಿ “ಇಲ್ಲ” ಎಂದು ಹೇಳುವಂತೆ ಅವರು ಧೈರ್ಯ ತುಂಬಿದ್ದಾರೆ.
ವೈರಲ್ ಆದ ಸಿಎಂ ವಿಜಯ್ ಭಾಷಣ
ಕರೂರ್ ರ‍್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ಯಾರಾದರೂ ನಿಮ್ಮ ಬಳಿ ಬಂದು ಲಂಚ ಕೇಳಿದರೆ, “ಕೊಡಲ್ಲ” ಎಂದು ಮುಖಕ್ಕೆ ಹೊಡೆದಂತೆ ಹೇಳಿ. ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ. ಒಂದು ವೇಳೆ ಅದರಾಚೆಗೂ ಯಾರಾದರೂ ನಿಮಗೆ ಒತ್ತಾಯಿಸಿದರೆ, ‘ನಮ್ಮ ಮಗ, ನಮ್ಮ ಸಹೋದರ, ನಮ್ಮ ವಿಜಯ್ ಈ ರಾಜ್ಯವನ್ನು ಆಳುತ್ತಿದ್ದಾನೆ’ ಎಂದು ಗಟ್ಟಿಯಾಗಿ ಹೇಳಿ,” ಎಂದು ಕರೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ಮಾತುಗಳಿಗೆ ನೆರೆದಿದ್ದ ಸಹಸ್ರಾರು ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಭಾರಿ ಕರತಾಡನ ಹಾಗೂ ಹರ್ಷೋದ್ಗಾರ ವ್ಯಕ್ತವಾಗಿದ್ದು, ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಪೊಲೀಸರ ವಿರುದ್ಧ ಆಕ್ರೋಶ
ಚುನಾವಣೆಗೆ ಮುನ್ನ ಅಂದರೆ 2025ರಲ್ಲಿ ಕರೂರ್‌ನಲ್ಲಿ ನಡೆದಿದ್ದ ಇವರ ರ‍್ಯಾಲಿಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 41 ಕ್ಕೂ ಹೆಚ್ಚು ಅಮಾಯಕರು ಸಾವನ್ನಪ್ಪಿದ್ದರು. ಆ ಭೀಕರ ದುರಂತದ ನಂತರ ಮುಖ್ಯಮಂತ್ರಿ ವಿಜಯ್ ಅವರು ಕರೂರ್ ಜಿಲ್ಲೆಗೆ ನೀಡಿದ ಮೊದಲ ಅಧಿಕೃತ ಭೇಟಿ ಇದಾಗಿದೆ. ಈ ವೇಳೆ ದುರಂತವನ್ನು ನೆನೆದು ತೀವ್ರ ಭಾವುಕರಾದ ಅವರು, ಅಷ್ಟು ದೊಡ್ಡ ಜನಸಮೂಹಕ್ಕೆ ಸೂಕ್ತ ರಕ್ಷಣೆ ನೀಡದ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಅಂದು ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಪೊಲೀಸರು ಸಭೆಯನ್ನೇ ರದ್ದುಗೊಳಿಸಬೇಕಿತ್ತು, ಆದರೆ ಅವರು ಯಾವುದೇ ಮುನ್ಸೂಚನೆ ನೀಡದೆ ತಮ್ಮನ್ನು ಕಾರ್ಯಕ್ರಮಕ್ಕೆ ಕರೆತಂದರು ಎಂದು ವಿಜಯ್ ಆರೋಪಿಸಿದ್ದಾರೆ. ಇದೇ ವೇಳೆ, ಮೃತರ ಸ್ಮರಣಾರ್ಥ ಕರೂರ್‌ನಲ್ಲಿ ಟಿವಿಕೆ ಪಕ್ಷದ ವತಿಯಿಂದ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿದ ಅವರು, ದುರಂತದಲ್ಲಿ ತೊಂದರೆಗೀಡಾದ 31 ಕುಟುಂಬಗಳ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗದ ಆದೇಶ ಪತ್ರಗಳನ್ನು ವಿತರಿಸಿದರು.
ಡಿಎಂಕೆ ತಿರುಗೇಟು
ಇದೇ ವೇಳೆ ಸಿಎಂ ವಿಜಯ್ ಅವರ ಭ್ರಷ್ಟಾಚಾರ ವಿರೋಧಿ ಹೇಳಿಕೆಗೆ ವಿರೋಧ ಪಕ್ಷವಾದ ಡಿಎಂಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಡಿಎಂಕೆ ಹಿರಿಯ ನಾಯಕ ಟಿ.ಕೆ.ಎಸ್. ಇಳಂಗೋವನ್ ಮಾತನಾಡಿ, ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಒಳಗಡೆಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದಾರೆ. ಟಿವಿಕೆ ಪಕ್ಷದ ಕಾನೂನು ಘಟಕಕ್ಕೆ ವಕೀಲರನ್ನು ನೇಮಿಸಲು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ನಾಯಕರೊಬ್ಬರು ಲಕ್ಷಾಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಸ್ವತಃ ಅವರದೇ ಪಕ್ಷದ ವಕೀಲರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಬಗ್ಗೆ ಮೊದಲು ವಿಜಯ್ ಅವರು ಉತ್ತರಿಸಲಿ ಎಂದು ಇಳಂಗೋವನ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಜು.17ಕ್ಕೆ ಜಿಬಿಎ ಚುನಾವಣೆ ಭವಿಷ್ಯ ನಿರ್ಧಾರ ; ಸುಪ್ರೀಂ ಕೋರ್ಟ್ ವಿಚಾರಣೆ ಮೇಲೆ ಎಲ್ಲರ ಚಿತ್ತ!


















