ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಹಳೆಯ ಮನೆ ರಿಪೇರಿ ಮಾಡುವ ವೇಳೆ ಏಕಾಏಕಿ ಮನೆ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.
ಮೃತರನ್ನು ಕೊಟ್ಟಲಗಿ ಗ್ರಾಮದ ನಿವಾಸಿಗಳಾದ ಮಾದೇವ್ ಕೃಷ್ಣಪ್ಪ ಬಡಿಗೇರ್ (48) ಹಾಗೂ ಸೈಯದ್ ಕೆಂಪವಾಡಿ (32) ಎಂದು ಗುರುತಿಸಲಾಗಿದೆ. ಎಂದಿನಂತೆ ಕೆಲಸಕ್ಕೆ ತೆರಳಿದ್ದ ಇಬ್ಬರೂ ಲಕ್ಷ್ಮೀಬಾಯಿ ನಂದಗೊಂಡ ಅವರಿಗೆ ಸೇರಿದ ಹಳೆಯ ಮನೆಯ ರಿಪೇರಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ದುರಂತ ಸಂಭವಿಸಿದೆ.
ರಿಪೇರಿ ನಡೆಯುತ್ತಿದ್ದಾಗ ಏಕಾಏಕಿ ಮನೆಯ ಒಂದು ಭಾಗ ಕುಸಿದು ಬಿದ್ದಿದ್ದು, ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯ ನಡೆಸಿ ಅವರನ್ನು ಹೊರತೆಗೆದು ಪಕ್ಕದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ರಾಮಮಂದಿರ ಕಾಣಿಕೆ ಕಳವು ಕೇಸ್ : ‘ಚಂಪತ್ ರಾಯ್‌ಗೆ ದ್ರೋಹ ಮಾಡಲಾಗಿದೆ’ ಎಂದು ಹೇಳಿದ್ಯಾರು?



















