ನವದೆಹಲಿ : ಅಮೆರಿಕದ ಜಾರ್ಜಿಯಾದಲ್ಲಿ ಗೂಗಲ್ ಸಂಸ್ಥೆಯ ಹಿರಿಯ ತಂತ್ರಜ್ಞಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ಶೀತಲ್ ವೃಜಿಸಿಯನ್ (57) ಅವರನ್ನು ಅವರ ಪತಿಯೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ವರದಿಯಾಗಿದೆ.
ಈ ಘಟನೆಯಲ್ಲಿ ದಂಪತಿಯ 23 ವರ್ಷದ ಮಗ ಜೇಸನ್ ವೃಜಿಸಿಯನ್ ಕೂಡ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಾರ್ಜಿಯಾದ ಸ್ಮಿರ್ನಾ ನಗರದಲ್ಲಿರುವ ಶೀತಲ್ ಅವರ ನಿವಾಸದಲ್ಲಿ ಈ ಗುಂಡಿನ ದಾಳಿ ನಡೆದಿದೆ.
ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರ ಮಾಹಿತಿಯ ಮೇರೆಗೆ ಮನೆಗೆ ಕಾಬ್ ಕೌಂಟಿ ಪೊಲೀಸರು ಧಾವಿಸಿದಾಗ, ಮನೆಯೊಳಗೆ ಗುಂಡೇಟಿನಿಂದ ಮೃತಪಟ್ಟ ಸ್ಥಿತಿಯಲ್ಲಿ ಶೀತಲ್ ಅವರ ಮೃತದೇಹ ಪತ್ತೆಯಾಗಿದೆ. ಇನ್ನು ಮಗ ಜೇಸನ್ ಮನೆಯ ಹೊರಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದು, ತಕ್ಷಣವೇ ಆತನನ್ನು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶೀತಲ್ ಅವರ ಪತಿ, 56 ವರ್ಷದ ಕಿರ್ಕ್ ಬಿ. ವೃಜಿಸಿಯನ್‌ನನ್ನು ಪೊಲೀಸರು ಮಂಗಳವಾರ ರಾತ್ರಿ ಮನೆಯಲ್ಲೇ ಬಂಧಿಸಿದ್ದಾರೆ. ಆರೋಪಿಗೆ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದ್ದು, ಪ್ರಸ್ತುತ ಆತನನ್ನು ಕಾಬ್ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ.
ಪತಿ ವಿರುದ್ಧ ಗಂಭೀರ ಪ್ರಕರಣ ದಾಖಲು
ಕಾಬ್ ಕೌಂಟಿ ಪೊಲೀಸ್ ಇಲಾಖೆಯ ಪ್ರಕಾರ, ಆರೋಪಿ ಕಿರ್ಕ್ ವೃಜಿಸಿಯನ್ ವಿರುದ್ಧ ಹತ್ಯೆ, ಎರಡು ಕೊಲೆ ಯತ್ನ ಪ್ರಕರಣಗಳು ಮತ್ತು ಅಪರಾಧದ ಸಮಯದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಕೌಟುಂಬಿಕ ಕಲಹದಿಂದ ನಡೆದ ಘಟನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಪತ್ನಿ ಮತ್ತು ಮಗನ ಮೇಲೆ ಗುಂಡು ಹಾರಿಸಲು ನಿಖರವಾದ ಕಾರಣ ಅಥವಾ ಪ್ರಚೋದನೆ ಏನೆಂಬುದು ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂತ್ರಜ್ಞಾನ ಲೋಕದ ಪ್ರತಿಭಾನ್ವಿತೆ ಶೀತಲ್
ಕೊಲೆಯಾದ ಶೀತಲ್ ವೃಜಿಸಿಯನ್ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದ ಅನುಭವ ಹೊಂದಿದ್ದ ಅತ್ಯಂತ ಪ್ರತಿಭಾವಂತ ಮಹಿಳೆಯಾಗಿದ್ದರು. ಗೂಗಲ್ ಸಂಸ್ಥೆಯಲ್ಲಿ ಎಂಜಿನಿಯರಿಂಗ್ ವಿಭಾಗದ ಮುಖಂಡರಾಗಿ ಕಾರ್ಯನಿರ್ವಹಿಸುವ ಮುನ್ನ ಅವರು ಹೋಮ್ ಡಿಪೋ (HomeDepot.com) ಕಂಪನಿಯ ಡಿಜಿಟಲ್ ರೂಪಾಂತರದ ನೇತೃತ್ವ ವಹಿಸಿದ್ದರು. ಹವಾಮಾನ ಮತ್ತು ಹಣಕಾಸು ತಂತ್ರಜ್ಞಾನ ಕ್ಷೇತ್ರಗಳಲ್ಲೂ ಅವರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು.
ಭಾರತ, ಇಂಗ್ಲೆಂಡ್ ಹಾಗೂ ಘಾನಾ ದೇಶಗಳಲ್ಲಿ ಬೆಳೆದಿದ್ದ ಶೀತಲ್, ನಂತರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿ ಜಾರ್ಜಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. ಅವರು ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಎರಡು ಪೇಟೆಂಟ್‌ಗಳನ್ನು ಹೊಂದಿದ್ದರು ಹಾಗೂ ಜಾರ್ಜಿಯಾ ಟೆಕ್ ಹಳೆಯ ವಿದ್ಯಾರ್ಥಿಗಳ ಸಂಘದ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಪತಿ ಕಿರ್ಕ್ ಹಾಗೂ ಮಕ್ಕಳಾದ ಜೇಸನ್ ಮತ್ತು ಜೆಸ್ಸಿಕಾ ಅವರೊಂದಿಗೆ ಅವರು ಅಟ್ಲಾಂಟಾದಲ್ಲಿ ವಾಸಿಸುತ್ತಿದ್ದರು. ಇಂತಹ ಉನ್ನತ ಸಾಧಕಿಯೊಬ್ಬರು ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿರುವುದು ತಂತ್ರಜ್ಞಾನ ವಲಯದಲ್ಲಿ ತೀವ್ರ ದಿಗ್ಭ್ರಮೆ ಮೂಡಿಸಿದೆ.
ಇದನ್ನೂ ಓದಿ : ಇರಾನ್‌ನ 140 ನೆಲೆಗಳ ಮೇಲೆ ಅಮೆರಿಕ ಭೀಕರ ದಾಳಿ – UAE, ಕತಾರ್ ಮೇಲೆ ಟೆಹ್ರಾನ್ ಕ್ಷಿಪಣಿ ಪ್ರಹಾರ!



















