ಅಯೋಧ್ಯೆ : ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳವು ಪ್ರಕರಣದಲ್ಲಿ ವಿಶೇಷ ತನಿಖಾ ತಂಡ(ಎಸ್ಐಟಿ)ದ ತನಿಖೆ ತೀವ್ರಗೊಂಡಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿವಿಧ ಕಾರ್ಯಕ್ರಮಗಳಿಗಾಗಿ ವೆಚ್ಚ ಮಾಡಿರುವ ಬರೋಬ್ಬರಿ 124 ಕೋಟಿ ರೂಪಾಯಿಗಳಿಗೂ ಅಧಿಕ ಹಣದ ಮೇಲೆ ಈಗ ಎಸ್ಐಟಿ ನಿಗಾ ಇಟ್ಟಿದೆ. ಭಕ್ತರ ಕಾಣಿಕೆ ಕಳುವು ಆರೋಪದ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಎಸ್‌ಐಟಿ, ಇದೀಗ ತನ್ನ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಕಳೆದ ಎರಡು ವರ್ಷಗಳ ಟ್ರಸ್ಟ್‌ನ ಆಡಿಟ್ ವರದಿಗಳು, ಪಾವತಿ ವೋಚರ್‌ಗಳು ಹಾಗೂ ಬ್ಯಾಂಕ್ ದಾಖಲೆಗಳ ಪರೀಶೀಲನೆಯನ್ನು ತೀವ್ರಗೊಳಿಸಿದೆ.
ಪ್ರಾಣಪ್ರತಿಷ್ಠಾಪನೆಗೆ ವೆಚ್ಚವಾಗಿತ್ತು 113 ಕೋಟಿ ರೂ.
ಎಸ್‌ಐಟಿ ಸದ್ಯ ಪರಿಶೀಲಿಸುತ್ತಿರುವ ಒಟ್ಟು ವೆಚ್ಚದಲ್ಲಿ ಅತಿ ದೊಡ್ಡ ಮೊತ್ತವು 2024ರ ಜನವರಿ 22ರಂದು ನಡೆದ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಂಬಂಧಿಸಿದ್ದಾಗಿದೆ. ಸುಮಾರು 8,000 ಗಣ್ಯರು ಭಾಗವಹಿಸಿದ್ದ ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ಟ್ರಸ್ಟ್ ಒಟ್ಟು 113 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ದಾಖಲೆಗಳು ಹೇಳುತ್ತಿವೆ. ಇದರಲ್ಲಿ ತಾತ್ಕಾಲಿಕ ಜರ್ಮನ್ ಶೆಡ್‌ಗಳು ಮತ್ತು ಟೆಂಟ್ ಸಿಟಿ ನಿರ್ಮಾಣಕ್ಕೆ 35.97 ಕೋಟಿ ರೂ., ಅಕ್ಷತೆ ಪೂಜೆ ಅಭಿಯಾನಕ್ಕೆ 30.85 ಕೋಟಿ ರೂ., ಪ್ರಚಾರ ಮತ್ತು ಜಾಹೀರಾತುಗಳಿಗಾಗಿ 21.77 ಕೋಟಿ ರೂ. ಹಾಗೂ ಅಲಂಕಾರ ಮತ್ತು ವಿದ್ಯುತ್ ದೀಪೋತ್ಸವಕ್ಕಾಗಿ 14.62 ಕೋಟಿ ರೂಪಾಯಿಗಳನ್ನು ಬಳಸಲಾಗಿದೆ. ಈ ಎಲ್ಲಾ ವೆಚ್ಚಗಳು ಟ್ರಸ್ಟ್‌ನ ನಿಯಮಾವಳಿಗಳ ಪ್ರಕಾರವೇ ನಡೆದಿವೆಯೇ ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.
ಧ್ವಜಾರೋಹಣ, ಮಹಾಕುಂಭ ವೆಚ್ಚದ ಮೇಲೂ ನಿಗಾ
ಕೇವಲ ಪ್ರಾಣಪ್ರತಿಷ್ಠಾಪನೆ ಮಾತ್ರವಲ್ಲದೆ, 2025ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 6,000 ಗಣ್ಯರ ಸಮ್ಮುಖದಲ್ಲಿ ನಡೆದ ಮಂದಿರದ ಧ್ವಜಾರೋಹಣ ಕಾರ್ಯಕ್ರಮದ 10.12 ಕೋಟಿ ರೂ. ವೆಚ್ಚದ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಇದರ ಸರಾಸರಿ ಲೆಕ್ಕಾಚಾರ ನೋಡಿದರೆ ಪ್ರತಿ ಅತಿಥಿಗೆ ಸುಮಾರು 16,000 ರೂ. ವೆಚ್ಚವಾಗಿರುವುದು ಕಂಡುಬಂದಿದೆ. ಇದರೊಂದಿಗೆ 2025ರ ಜನವರಿಯಲ್ಲಿ ನಡೆದ ಪ್ರತಿಷ್ಠಾ ದ್ವಾದಶಿ ಕಾರ್ಯಕ್ರಮದ 83 ಲಕ್ಷ ರೂ. ಹಾಗೂ ಮಹಾಕುಂಭ ಮೇಳದ ಸಂದರ್ಭದಲ್ಲಿ ಅಯೋಧ್ಯೆಗೆ ಬಂದ ಭಕ್ತರ ವ್ಯವಸ್ಥೆಗಾಗಿ ಖರ್ಚು ಮಾಡಲಾದ 43 ಲಕ್ಷ ರೂಪಾಯಿಗಳ ಲೆಕ್ಕವನ್ನೂ ಅಧಿಕಾರಿಗಳು ಜಾಲಾಡುತ್ತಿದ್ದಾರೆ.
ಟ್ರಸ್ಟ್‌ನಲ್ಲಿ ಪ್ರಮುಖ ಹುದ್ದೆಗಳ ಬದಲಾವಣೆ
ಕಾಣಿಕೆ ಹಣ ದುರುಪಯೋಗ ಹಾಗೂ ವೆಚ್ಚಗಳ ಕುರಿತ ವಿವಾದವು ಟ್ರಸ್ಟ್‌ನ ಒಳಗೆ ಭಾರಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಸೋಮವಾರ ನಡೆದ ಸಭೆಯಲ್ಲಿ ಟ್ರಸ್ಟ್ ಇವರಿಬ್ಬರ ರಾಜೀನಾಮೆಯನ್ನು ಅಂಗೀಕರಿಸಿದೆ. ಸದ್ಯ ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು, ಭಕ್ತರಲ್ಲಿ ವಿಶ್ವಾಸ ಮರುಕಳಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಆಡಳಿತಾತ್ಮಕ ಪರಾಮರ್ಶೆ ನಡೆಸುವುದಾಗಿ ಟ್ರಸ್ಟ್ ಪ್ರಕಟಿಸಿದೆ.
ಚಿನ್ನ, ಬೆಳ್ಳಿ ಕಾಣಿಕೆಗಳ ದಾಖಲೆ ಪರಿಶೀಲನೆ
ಹಣದ ವೆಚ್ಚದ ಜೊತೆಗೆ, ದೇಶದ ವಿವಿಧ ಮೂಲೆಗಳಿಂದ ಭಕ್ತರು ರಾಮಲಲ್ಲಾನಿಗೆ ಸಮರ್ಪಿಸಿರುವ ಅಮೂಲ್ಯ ಆಭರಣಗಳು ಮತ್ತು ಚಿನ್ನ-ಬೆಳ್ಳಿಯ ದಾಸ್ತಾನುಗಳನ್ನೂ ಎಸ್‌ಐಟಿ ಮರುಪರಿಶೀಲನೆ ಮಾಡುತ್ತಿದೆ. ದಾಖಲೆಗಳ ಪ್ರಕಾರ, ನವೆಂಬರ್ 2024 ರಿಂದ ಫೆಬ್ರವರಿ 2025ರ ಅವಧಿಯಲ್ಲಿ 2.3 ಕೆಜಿ ಚಿನ್ನ ಮತ್ತು 83.3 ಕೆಜಿ ಬೆಳ್ಳಿ ಹಾಗೂ ಮಹಾಕುಂಭದ ಅವಧಿಯಲ್ಲಿ ಹೆಚ್ಚುವರಿಯಾಗಿ 1.5 ಕೆಜಿ ಚಿನ್ನ ಮತ್ತು 28 ಕೆಜಿ ಬೆಳ್ಳಿಯನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ. ಇವೆಲ್ಲವೂ ಸುರಕ್ಷಿತವಾಗಿವೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದ್ದು, ಎಸ್‌ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಸದ್ಯಕ್ಕೆ ಇದು ಕೇವಲ ನಿಯಮಾನುಸಾರ ನಡೆಯುತ್ತಿರುವ ತನಿಖೆಯಾಗಿದ್ದು, ಯಾವುದೇ ಆರ್ಥಿಕ ಅವ್ಯವಹಾರ ನಡೆದಿರುವ ಬಗ್ಗೆ ಎಸ್‌ಐಟಿ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಜಿಂಬಾಬ್ವೆ ಟಿ20 ಸರಣಿಗೆ ಭಾರತ ತಂಡ ಪ್ರಕಟ ; ಸ್ಯಾಮ್ಸನ್‌ಗೆ ಶಾಕ್, ಸೂರ್ಯವಂಶಿಗೆ ಮತ್ತೊಮ್ಮೆ ಅವಕಾಶ



















