ನವದೆಹಲಿ : ಭಾರೀ ವಿವಾದ ಹಾಗೂ ವರ್ಷಗಳ ವಿಳಂಬದ ನಂತರ ಜುಲೈ 3 ರಂದು ‘ಝೀ5’ (ZEE5) ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಸಿನಿಮಾವನ್ನು ಇದೀಗ ಕೇವಲ ಎರಡೇ ದಿನಗಳಲ್ಲಿ ದಿಢೀರನೆ ವಾಪಸ್ ಪಡೆಯಲಾಗಿದೆ. ಈ ಚಿತ್ರದಲ್ಲಿರುವ ಕೆಲವು ದೃಶ್ಯಗಳು ಮತ್ತು ಅಂಶಗಳನ್ನು ದೇಶವಿರೋಧಿ ಶಕ್ತಿಗಳು ತಮ್ಮ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ನೆಪ ಹಳಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೂಲತಃ ‘ಪಂಜಾಬ್ 95’ ಎಂಬ ಹೆಸರನ್ನು ಹೊಂದಿದ್ದ ಈ ಸಿನಿಮಾ, ಹಲವು ವರ್ಷಗಳಿಂದ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗ ಹಾಗೂ ವಿವಾದಗಳಿಂದಾಗಿ ತಡೆ ಹಿಡಿಯಲ್ಪಟ್ಟಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅನುಮತಿ ಸಿಗದ ಕಾರಣ, ಕೊನೆಗೆ ಹೆಸರನ್ನು ಬದಲಾಯಿಸಿ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ತೀವ್ರ ಪರಿಶೀಲನೆಯ ನಂತರ ಈಗ ಒಟಿಟಿಯಿಂದಲೂ ಇದನ್ನು ತೆಗೆದುಹಾಕಲಾಗಿದ್ದು, ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.
ಚಿತ್ರದ ಕಥಾಹಂದರವೇನು?
ಪಂಜಾಬ್‌ನಲ್ಲಿ ಉಗ್ರಗಾಮಿ ಚಟುವಟಿಕೆಗಳು ಉತ್ತುಂಗದಲ್ಲಿದ್ದ 1980 ಮತ್ತು 90ರ ದಶಕದಲ್ಲಿ ನಡೆದಿದೆ ಎನ್ನಲಾದ ಕಾನೂನುಬಾಹಿರ ಕೊಲೆಗಳು ಹಾಗೂ ರಹಸ್ಯ ಶವಸಂಸ್ಕಾರಗಳ ವಿರುದ್ಧ ಧ್ವನಿ ಎತ್ತಿದ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಮತ್ತು ಹೋರಾಟವನ್ನು ಆಧರಿಸಿರುವ ಚಿತ್ರ ಇದಾಗಿದೆ. ಅಮೃತಸರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಖಾಲ್ರಾ ಅವರು ನಂತರ ಪೂರ್ಣಾವಧಿ ಹೋರಾಟಗಾರರಾಗಿ ಬದಲಾಗಿದ್ದರು. ಈ ಸೂಕ್ಷ್ಮ ಇತಿಹಾಸವನ್ನು ತೆರೆಯ ಮೇಲೆ ತಂದಿರುವುದೇ ಈಗಿನ ವಿವಾದಕ್ಕೆ ಮುಖ್ಯ ಕಾರಣವಾಗಿದೆ.
ಮೂರು ವರ್ಷಗಳ ಸೆನ್ಸಾರ್ ಹೋರಾಟ
2022ರಲ್ಲೇ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಸಲ್ಲಿಕೆಯಾಗಿದ್ದ ಈ ಸಿನಿಮಾ ಸುಮಾರು ಮೂರು ವರ್ಷಗಳ ಕಾಲ ಅಲ್ಲೇ ಬಾಕಿ ಉಳಿದಿತ್ತು. ಚಿತ್ರದ ನಿರ್ಮಾಪಕರ ಪ್ರಕಾರ, ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಬರೋಬ್ಬರಿ 127 ಕಡೆ ಕತ್ತರಿ ಪ್ರಯೋಗಕ್ಕೆ ಸೂಚಿಸಿತ್ತು. ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಸೂಕ್ತ ಪ್ರಮಾಣಪತ್ರ ಸಿಗದ ಕಾರಣ, ಒಟಿಟಿ ನಿಯಮಗಳ ಸ್ವಯಂ-ನಿಯಂತ್ರಣದ ಅವಕಾಶವನ್ನು ಬಳಸಿ ‘ಸತ್ಲುಜ್’ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿತ್ತಾದರೂ, ಬಿಡುಗಡೆಯಾದ ಬೆನ್ನಲ್ಲೇ ಈಗ ಪ್ರದರ್ಶನ ಸ್ಥಗಿತಗೊಂಡಿದೆ.
ದಿಲ್ಜಿತ್ ದೋಸಾಂಜ್ ಪ್ರತಿಕ್ರಿಯೆಯೇನು?
ಚಿತ್ರವನ್ನು ಹಿಂತೆಗೆದುಕೊಂಡಿರುವ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿರುವ ಝೀ5 ಸಂಸ್ಥೆಯು, “ನಾವು ‘ಸತ್ಲುಜ್’ ಸಿನಿಮಾ ಮತ್ತು ಅದರ ಸೃಜನಶೀಲ ದೃಷ್ಟಿಕೋನದ ಪರವಾಗಿ ದೃಢವಾಗಿ ನಿಲ್ಲುತ್ತೇವೆ. ಸೂಕ್ತ ಕಾನೂನು ಪ್ರಕ್ರಿಯೆಗಳ ಮೂಲಕ ಸಿನಿಮಾವನ್ನು ಆದಷ್ಟು ಬೇಗ ವೀಕ್ಷಕರಿಗೆ ಮರಳಿ ತರಲು ಪ್ರಯತ್ನಿಸುತ್ತೇವೆ” ಎಂದು ಹೇಳಿದೆ. ಮತ್ತೊಂದೆಡೆ, ನಟ ದಿಲ್ಜಿತ್ ದೋಸಾಂಜ್ ಅವರು ಚಿತ್ರದ ಸ್ಟಿಲ್ ಒಂದನ್ನು ಹಂಚಿಕೊಂಡು, “ನಾನು ಕತ್ತಲಿಗೆ ಸವಾಲು ಹಾಕುತ್ತೇನೆ. ಈ ಹಿಂದೆ ಶಹೀದ್ ಜಸ್ವಂತ್ ಸಿಂಗ್ ಖಾಲ್ರಾ ಅವರಿಗೆ ಆಗಿದ್ದೇ ಈಗ ‘ಸತ್ಲುಜ್’ ಸಿನಿಮಾಗೂ ಆಗಿದೆ” ಎಂದು ಪಂಜಾಬಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.
ತೀವ್ರಗೊಂಡ ರಾಜಕೀಯ ಆಕ್ರೋಶ
ಸಿನಿಮಾವನ್ನು ಒಟಿಟಿಯಿಂದ ತೆಗೆದುಹಾಕಿರುವುದಕ್ಕೆ ಪಂಜಾಬ್‌ನ ರಾಜಕೀಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಸಂಸದ ಮಾಲ್ವಿಂದರ್ ಸಿಂಗ್ ಕಾಂಗ್ ಮಾತನಾಡಿ, “ದೇಶವೊಂದು ತನ್ನದೇ ಇತಿಹಾಸವನ್ನು ಕಂಡು ಹೆದರಲು ಆರಂಭಿಸಿದಾಗ, ಸೆನ್ಸಾರ್‌ಶಿಪ್ ಅತ್ಯಂತ ಅಪಾಯಕಾರಿ ಅಸ್ತ್ರವಾಗುತ್ತದೆ. ಪಂಜಾಬ್‌ನ ಸತ್ಯವನ್ನು ಎದುರಿಸಲು ಬಿಜೆಪಿ ಸರ್ಕಾರಕ್ಕೆ ಇರುವ ಮುಜುಗರ ಮತ್ತು ಪಂಜಾಬ್ ಮೇಲಿನ ಪೂರ್ವಗ್ರಹವನ್ನು ಇದು ತೋರಿಸುತ್ತದೆ” ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಶಾಸಕ ಸುಖ್‌ಪಾಲ್ ಖೈರಾ ಕೂಡ ಈ ಕ್ರಮವನ್ನು ಖಂಡಿಸಿದ್ದು, “ಜಸ್ವಂತ್ ಸಿಂಗ್ ಖಾಲ್ರಾ ಅವರು ಬಹಿರಂಗಪಡಿಸಿದ ಮಾನವ ಹಕ್ಕುಗಳ ಉಲ್ಲಂಘನೆಯ ಸತ್ಯಗಳನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ. ಇಂತಹ ಸತ್ಯ ಘಟನಾಧಾರಿತ ಸಿನಿಮಾವನ್ನು ತಡೆಯುವುದು ನಿರಾಶಾದಾಯಕ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಿ.ಪಿ.ಯೋಗೇಶ್ವರ್ ಪುತ್ರನಿಗೆ ಸಿಎಂ ಡಿ.ಕೆ ಶಿವಕುಮಾರ್ ಸಾಥ್..!



















