ಗೀತು ಮೋಹನ್ ದಾಸ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಘೋಷಣೆಯಾದ ದಿನದಿಂದಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಚಿತ್ರದ ಭರ್ಜರಿ ಟೀಸರ್‌ವೊಂದು ಬಿಡುಗಡೆಯಾಗಿದೆ.
‘ಲೇಡೀಸ್ & ಲೇಡೀಸ್’ ಹೆಸರಿನ ಈ ಪ್ರಮೋಷನಲ್ ವಿಡಿಯೋ ಚಿತ್ರದ ಪ್ರಬಲ ಮಹಿಳಾ ಪಾತ್ರವರ್ಗ ಮತ್ತು ಈ ಡಾರ್ಕ್ ಜಗತ್ತಿನಲ್ಲಿ ಅವರ ಸುತ್ತ ಹೆಣೆಯಲಾದ ರಗಡ್ ಪಾತ್ರಗಳನ್ನು ಪರಿಚಯಿಸಿದೆ.
ವಿಡಿಯೋದ ಆರಂಭದಲ್ಲೇ ಗಮನ ಸೆಳೆಯುವ ವಿಭಿನ್ನವಾದ ವಯಸ್ಸಿನ ಎಚ್ಚರಿಕೆಯ ಸಂದೇಶವೊಂದನ್ನು ನೀಡಲಾಗಿದ್ದು, “ಮಕ್ಕಳೇ ದೂರವಿರಿ, ಪೋಷಕರೇ ನಿಮ್ಮ ಮಕ್ಕಳನ್ನು ದೂರವಿಡಿ, ಮುತ್ತಜ್ಜ-ಮುತ್ತಜ್ಜಿಯರೇ ನಿಮ್ಮ ಸ್ವಂತ ಜವಾಬ್ದಾರಿಯ ಮೇಲೆ ನೋಡಿ” ಎನ್ನುವ ಒಕ್ಕಣೆ ಕುತೂಹಲ ಮೂಡಿಸಿದೆ.
ಕೇವಲ ಪ್ರೇಮಪಾತ್ರಗಳಿಗೆ ಸೀಮಿತವಾಗದ ಈ ನಾರಿಯರು, “ಪ್ರೀತಿ ಹೆಣ್ಣುಮಕ್ಕಳನ್ನು ರಾಕ್ಷಸರನ್ನಾಗಿ ಮಾಡುತ್ತದೆ. ಅದರ ವಂಚನೆಯ ಆಳವನ್ನು ಅರ್ಥಮಾಡಿಕೊಂಡರೆ ಅದೊಂದು ಸುಂದರ ಭ್ರಮೆ” ಎಂಬ ಗಂಭೀರ ಹಿನ್ನೆಲೆ ಧ್ವನಿಯೊಂದಿಗೆ ಅಬ್ಬರಿಸಿದ್ದಾರೆ.
ಈ ವಿಡಿಯೋದಲ್ಲಿ ಚಿತ್ರದ ಪ್ರಮುಖ ನಾಯಕಿಯರನ್ನು ಅತ್ಯಂತ ವಿಶಿಷ್ಟವಾದ ರೆಟ್ರೋ-ಗೋಥಿಕ್ ಶೈಲಿಯಲ್ಲಿ ಪರಿಚಯಿಸಲಾಗಿದೆ. ನಯನತಾರಾ ಸರ್ಕಸ್ ಮಾದರಿಯ ಕೆಂಪು ಪರದೆಗಳ ಮಧ್ಯೆ ಪ್ರಕಾಶಮಾನವಾದ ವ್ಯಾನಿಟಿ ಕನ್ನಡಿಯ ಮುಂದೆ ಕಾಣಿಸಿಕೊಂಡರೆ, ಕಿಯಾರಾ ಅಡ್ವಾಣಿ ಬೆಂಕಿ ಉಗುಳುವ ಕಲಾಕಾರರ ಮಧ್ಯೆ ಗ್ಲಾಮರಸ್ ಆಗಿ ಮಿನುಗಿದ್ದಾರೆ. ಇನ್ನು ತಾರಾ ಸುತಾರಿಯಾ ಹೊಗೆ ತುಂಬಿದ ಅದ್ದೂರಿ ಲಾಂಜ್‌ನಲ್ಲಿ ಅಲ್ಟ್ರಾ ಮಾಡರ್ನ್ ಆಗಿ ಮಿಂಚಿದರೆ, ರುಕ್ಮಿಣಿ ವಸಂತ್ ವಿಂಟೇಜ್ ಮೆಟ್ಟಿಲುಗಳ ಮೇಲೆ ಪಿಸ್ತೂಲ್ ಹಿಡಿದು ಪಕ್ಕಾ ಆಕ್ಷನ್ ಮೂಡ್‌ನಲ್ಲಿ ಅಬ್ಬರಿಸಿದ್ದಾರೆ. ನಟಿ ಹುಮಾ ಖುರೇಷಿ ಕತ್ತಲೆಯಾದ ಡೈನಿಂಗ್ ಹಾಲ್‌ನಲ್ಲಿ ಚರ್ಮದ ಉಡುಪು ಧರಿಸಿದ ಗೋಥ್ ಗ್ಯಾಂಗ್ ಮುನ್ನಡೆಸುತ್ತಾ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಆಗಸ್ಟ್ 26ರಂದು ‘ಟಾಕ್ಸಿಕ್’ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.
ಇದನ್ನೂ ಓದಿ : ಸಂಪೂರ್ಣ ಗೋಹತ್ಯೆ ನಿಷೇಧ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ!



















