ದಾವಣಗೆರೆ : ನಗರದಲ್ಲಿ ತಡರಾತ್ರಿ ಮದ್ಯದ ಅಮಲಿನಲ್ಲಿದ್ದ ಮಹಿಳೆಯೊಬ್ಬಳು ರಸ್ತೆ ಮಧ್ಯೆಯೇ ಭಾರಿ ರಂಪಾಟ ನಡೆಸಿದ ಘಟನೆ ನಡೆದಿದೆ. ಶಾಮನೂರು ರಸ್ತೆಯಲ್ಲಿ ಸಂಚಾರಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಮಾಹಿತಿಯ ಪ್ರಕಾರ, ಪ್ರೀತಿ ಎಂಬ ಮಹಿಳೆ ಅತಿಯಾಗಿ ಮದ್ಯ ಸೇವಿಸಿ ಥಾರ್ ಕಾರು ಚಲಾಯಿಸುತ್ತಿದ್ದರು. ಪ್ರೀತಿ ತದ್ವಿರುದ್ಧವಾಗಿ ಕಾರು ಚಲಾಯಿಸುತ್ತಿದ್ದ ಹಿನ್ನೆಲೆ ಸಂಚಾರಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆಗೆ ಮುಂದಾಗಿದ್ದರು. ಆದರೆ ತಪಾಸಣೆಗೆ ಸಹಕರಿಸದೆ ಪ್ರೀತಿ ಪೊಲೀಸರೊಂದಿಗೇ ವಾಗ್ವಾದ ಆರಂಭಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ.
ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿ, ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ಐ ಮೇಲೆ ಕಾಲಿನಿಂದ ಹೊಡೆದು ಪ್ರೀತಿ ಹಲ್ಲೆ ನಡೆಸಿರುವ ಆರೋಪವೂ ಕೇಳಿಬಂದಿದೆ. ಘಟನೆ ವೇಳೆ ಪೊಲೀಸರು ಮಹಿಳೆಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.
ರಸ್ತೆ ಮಧ್ಯೆ ನಡೆದ ಈ ಗಲಾಟೆಯನ್ನು ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದು, ಮಹಿಳೆಯ ರಂಪಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಈ ಪ್ರಕರಣ ಸಂಬಂಧ ಪ್ರೀತಿ ವಿರುದ್ಧ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಹಣದಾಸೆಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ರಾ ಆರ್‌ಐ? ; ಕೂಡ್ಲಿಗಿ ಕಂದಾಯ ನಿರೀಕ್ಷಕರ ವಿರುದ್ಧ ಗಂಭೀರ ಆರೋಪ!



















