ಉಡುಪಿ ; ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯನ್ನು ವಿರೋಧಿಸಿ, ಹಾಗೂ ಕೆಇಆರ್‌ಸಿ ಮೂಲಕ ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ, ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕುಂದಾಪುರ ತಾಲ್ಲೂಕಿನ ಸಿಪಿಐಎಂ ಕಾರ್ಯದರ್ಶಿ ಚಂದ್ರಶೇಖರ್, ವಿದ್ಯುತ್ ಸೇವೆಯು ಲಾಭದಾಯಕ ವ್ಯಾಪಾರವಲ್ಲ, ಅದು ಜನರ ಮೂಲಭೂತ ಹಕ್ಕು ಮತ್ತು ಅತ್ಯಗತ್ಯ ಸಾರ್ವಜನಿಕ ಸೇವೆಯಾಗಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಿದರೆ ವಿದ್ಯುತ್ ದರಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಇದರ ನೇರ ಹೊರೆ ಸಾಮಾನ್ಯ ಜನರು, ರೈತರು ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರಿಗೆ ಸರ್ಕಾರ ನೀಡುತ್ತಿರುವ ವಿದ್ಯುತ್ ಸಬ್ಸಿಡಿ, ಸಾಮಾಜಿಕ ಕಲ್ಯಾಣ ಯೋಜನೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಖಾಸಗೀಕರಣದಿಂದ ಧಕ್ಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಂಪನಿಗಳ ಕೈಗೆ ಒಪ್ಪಿಸುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ವಿದ್ಯುತ್ ಖಾಸಗೀಕರಣವು ಜನವಿರೋಧಿ ನೀತಿಯಾಗಿದ್ದು, ಟಾಟಾ ಪವರ್ ಕಂಪನಿ ಲಿಮಿಟೆಡ್ ಸಲ್ಲಿಸಿರುವ ವಿದ್ಯುತ್ ವಿತರಣಾ ಪರವಾನಗಿ ಅರ್ಜಿಯನ್ನು ರಾಜ್ಯ ಸರ್ಕಾರ ತಕ್ಷಣವೇ ತಿರಸ್ಕರಿಸಬೇಕು. ರಾಜ್ಯದ ರೈತರು, ಗ್ರಾಹಕರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಬಾರದು ಎಂದು ಪ್ರತಿಭಟನೆಯಲ್ಲಿ ಸಿಪಿಐಎಂ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಎಣ್ಣೆ ಏಟಲ್ಲಿ ಮಹಿಳೆಯ ಬೀದಿ ರಂಪಾಟ – ಅವಾಚ್ಯ ಶಬ್ದಗಳಿಂದ ನಿಂದಿಸಿ ಪಿಎಸ್‌ಐಗೆ ಹಲ್ಲೆ!


















