ಬೆಂಗಳೂರು : ವಿವಾದದ ಸುಳಿಗೆ ಸಿಕ್ಕಿರೋ ಬಾಸ್ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ನಟ ತನುಶ್ ಶಿವಣ್ಣ ನಾಯಕನಾಗಿ ಅಭಿನಯಿಸಿರುವ, ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ವಕೀಲರೂ ಆಗಿರುವ ನಿರ್ದೇಶಕ ವಿ.ಲವ ಕಥೆ ಬರೆದು ನಿರ್ದೇಶಿಸಿರುವ ಬಹುನಿರೀಕ್ಷಿತ “ಬಾಸ್” ಚಲನಚಿತ್ರದ ಭವಿಷ್ಯ ದಿನಾಂಕ 26-06-2026 ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಿರ್ಧಾರವಾಗುವ ಸಾಧ್ಯತೆ ಇದೆ.

ಚಲನಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿದ್ದು, ಈಗಾಗಲೇ ಚಿತ್ರದ ಬಿಡುಗಡೆ ಕುರಿತು ಮಧ್ಯಂತರ ಮೌಖಿಕ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಚಿತ್ರತಂಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾಳೆಯ ವಿಚಾರಣೆಯು ಚಿತ್ರದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಿ ಪರಿಣಮಿಸಿದೆ.

ಅರ್ಜಿದಾರರಾದ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಪರವಾಗಿ ಹಿರಿಯ ವಕೀಲ ಶ್ರೀ ಶ್ಯಾಮಸುಂದರ್ ಅವರು ವಾದ ಮಂಡಿಸಲಿದ್ದು, ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರ ಪರವಾಗಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಶ್ರೀ ವಿವೇಕ್ ಸುಬ್ಬಾರೆಡ್ಡಿ ವಾದ ಮಂಡಿಸಲಿದ್ದಾರೆ.
ವಿಶೇಷವೆಂದರೆ, “ಬಾಸ್” ಚಿತ್ರದ ನಿರ್ದೇಶಕ ವಿ.ಲವ ವಕೀಲ ವೃತ್ತಿಯಲ್ಲಿಯೂ ಸಕ್ರಿಯರಾಗಿದ್ದು, ಕಾನೂನು ಕ್ಷೇತ್ರದ ಹಿನ್ನೆಲೆಯೊಂದಿಗೆ ಚಲನಚಿತ್ರವನ್ನು ನಿರ್ದೇಶಿಸಿರುವುದು ಈ ಪ್ರಕರಣದ ಮತ್ತೊಂದು ವಿಶೇಷ ಅಂಶವಾಗಿದೆ. ಕಲಾತ್ಮಕ ಅಭಿವ್ಯಕ್ತಿ ಮತ್ತು ಕಾನೂನು ಹಕ್ಕುಗಳ ನಡುವಿನ ಸಮತೋಲನದ ಪ್ರಶ್ನೆಗಳು ಈ ವಿಚಾರಣೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ.
ಚಿತ್ರದ ಕಥಾವಸ್ತು, ಅಭಿವ್ಯಕ್ತಿ ಸ್ವಾತಂತ್ರ್ಯ, ಕಲಾತ್ಮಕ ಸ್ವಾತಂತ್ರ್ಯ ಹಾಗೂ ಅರ್ಜಿದಾರರು ಎತ್ತಿರುವ ಆಕ್ಷೇಪಣೆಗಳ ಕುರಿತು ಉಭಯ ಪಕ್ಷಗಳ ವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್ ತನ್ನ ಆದೇಶವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಚಿತ್ರರಂಗ, ಕಾನೂನು ವಲಯ ಹಾಗೂ ತನುಶ್ ಶಿವಣ್ಣ ಅಭಿಮಾನಿಗಳ ಗಮನವನ್ನ ಸೆಳೆದಿರುವ ಈ ಪ್ರಕರಣದಲ್ಲಿ, “ಬಾಸ್” ಚಲನಚಿತ್ರ ಬಿಡುಗಡೆಗೆ ಅವಕಾಶ ದೊರೆಯುತ್ತದೆಯೇ ಅಥವಾ ನಿರ್ಬಂಧ ಮುಂದುವರಿಯುತ್ತದೆಯೇ ಎಂಬುದು ನಾಳೆಯ ಹೈಕೋರ್ಟ್ ಆದೇಶದಿಂದ ಸ್ಪಷ್ಟವಾಗಲಿದೆ.



















