ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಎಥೆನಾಲ್ ಮಿಶ್ರಿತ ಇಂಧನಗಳ ಬಳಕೆ ಭಾರೀ ಸದ್ದು ಮಾಡುತ್ತಿದೆ. ಜೂನ್ 5ರಂದು ದೆಹಲಿಯ ಪುಸಾ ರೋಡ್‌ನಲ್ಲಿರುವ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ದೇಶದ ಮೊದಲ ‘ಇ85’ (E85) ಫ್ಲೆಕ್ಸ್ ಫ್ಯುಯೆಲ್ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಸಾಮಾನ್ಯ ಇ20 (E20) ಇಂಧನಕ್ಕೆ ಹೋಲಿಸಿದರೆ ಇ85 ಇಂಧನವು ಲೀಟರ್‌ಗೆ ಬರೋಬ್ಬರಿ 20 ರೂಪಾಯಿ ಅಗ್ಗವಾಗಿದೆ. ಆದರೆ, ಬೆಲೆ ಕಡಿಮೆ ಇದೆ ಎಂದು ಫ್ಲೆಕ್ಸ್ ಫ್ಯುಯೆಲ್ ಬಳಸಲು ಮುಂದಾಗುವ ಮುನ್ನ ವಾಹನ ಸವಾರರು ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಣ್ಣಿಗೆ ಕಾಣುವ ಈ ಬೆಲೆ ಇಳಿಕೆಯು ನಿಜಕ್ಕೂ ಜೇಬಿಗೆ ಲಾಭದಾಯಕವೇ ಎಂಬುದನ್ನು ಪತ್ತೆಹಚ್ಚಲು ನಡೆಸಿದ ಮೈಲೇಜ್ ಪರೀಕ್ಷೆಯಲ್ಲಿ ಆಘಾತಕಾರಿ ಸತ್ಯವೊಂದು ಹೊರಬಿದ್ದಿದೆ. ಇ85 ಇಂಧನ ಬಳಸಿದಾಗ ವಾಹನದ ಮೈಲೇಜ್‌ನಲ್ಲಿ ಬರೋಬ್ಬರಿ ಶೇ.43ರಷ್ಟು ಕುಸಿತ ಕಂಡುಬಂದಿದೆ.
ಅಗ್ಗದ ಬೆಲೆಯ ಇ85 ಇಂಧನದಲ್ಲಿ ಮೈಲೇಜ್ ಕುಸಿತಕ್ಕೆ ಕಾರಣವೇನು?
ದೆಹಲಿಯಲ್ಲಿ ಪ್ರಸ್ತುತ ಇ20 ಇಂಧನದ ಬೆಲೆ ಲೀಟರ್‌ಗೆ 102.12 ರೂ. ಇದ್ದರೆ, ಇ85 ಇಂಧನದ ಬೆಲೆ ಕೇವಲ 82.12 ರೂ. ಇದೆ. ಮೇಲ್ನೋಟಕ್ಕೆ ಇದು ಭಾರಿ ಲಾಭದಾಯಕವಾಗಿ ಕಂಡರೂ, ತಾಂತ್ರಿಕವಾಗಿ ಎಥೆನಾಲ್ ಇಂಧನವು ಪೆಟ್ರೋಲ್‌ಗಿಂತ ಕಡಿಮೆ ಇಂಧನ ಸಾಂದ್ರತೆಯನ್ನು (Energy Density) ಹೊಂದಿರುತ್ತದೆ. ಶುದ್ಧ ಪೆಟ್ರೋಲ್ ಪ್ರತಿ ಲೀಟರ್‌ಗೆ ಸುಮಾರು 32 ರಿಂದ 34 ಮೆಗಾಜೌಲ್ ಶಕ್ತಿಯನ್ನು ಉತ್ಪಾದಿಸಿದರೆ, ಎಥೆನಾಲ್ ಕೇವಲ 21 ರಿಂದ 24 ಮೆಗಾಜೌಲ್ ಶಕ್ತಿಯನ್ನು ನೀಡುತ್ತದೆ. ಇದರ ನೇರ ಪರಿಣಾಮವಾಗಿ, ಇ85 ಇಂಧನದಲ್ಲಿ ಚಲಿಸುವ ವಾಹನವು ಅದೇ ಪ್ರಮಾಣದ ಶಕ್ತಿಯನ್ನು ಉತ್ಪಾದಿಸಲು ಅತಿ ಹೆಚ್ಚು ಇಂಧನವನ್ನು ಬಳಸಿಕೊಳ್ಳುತ್ತದೆ. ಹೀಗಾಗಿ ವಾಹನದ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತದೆ.
ಸುಜುಕಿ ಗಿಕ್ಸರ್ ಬೈಕ್‌ನಲ್ಲಿ ನಡೆಸಿದ ಮೈಲೇಜ್ ಟೆಸ್ಟ್ ವರದಿ
ಈ ಸತ್ಯವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಸುಜುಕಿ ಗಿಕ್ಸರ್ ಎಸ್‌ಎಫ್ 250 (Suzuki Gixxer SF 250) ಫ್ಲೆಕ್ಸ್ ಫ್ಯುಯೆಲ್ ಬೈಕ್ ಬಳಸಿ ‘ಟ್ಯಾಂಕ್-ಟು-ಟ್ಯಾಂಕ್’ ಮೈಲೇಜ್ ಪರೀಕ್ಷೆ ನಡೆಸಲಾಯಿತು. ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿ ಇ20 ಇಂಧನವನ್ನು ಪೂರ್ತಿಯಾಗಿ ತುಂಬಿಸಿ 124.2 ಕಿಲೋಮೀಟರ್ ಚಲಿಸಿದಾಗ ಬೈಕ್ ಕೇವಲ 2.44 ಲೀಟರ್ ಇಂಧನವನ್ನು ಬಳಸಿಕೊಂಡು ಪ್ರತಿ ಲೀಟರ್‌ಗೆ 50.9 ಕಿಲೋಮೀಟರ್ ಅತ್ಯುತ್ತಮ ಮೈಲೇಜ್ ನೀಡಿತು. ಆದರೆ, ಇದೇ ಬೈಕ್‌ಗೆ ಇ85 ಇಂಧನವನ್ನು ತುಂಬಿಸಿ 127 ಕಿಲೋಮೀಟರ್ ಚಲಿಸಿದಾಗ ಅದು ಬರೋಬ್ಬರಿ 4.37 ಲೀಟರ್ ಇಂಧನವನ್ನು ಹೀರಿಕೊಂಡಿತು. ಅಂದರೆ ಇ85 ಇಂಧನದಲ್ಲಿ ಬೈಕ್‌ನ ಮೈಲೇಜ್ ಕೇವಲ 29.06 ಕಿಲೋಮೀಟರ್‌ಗೆ ಕುಸಿಯಿತು. ಈ ಮೂಲಕ ಇ20 ಗೆ ಹೋಲಿಸಿದರೆ ಇ85 ನಲ್ಲಿ ಮೈಲೇಜ್ ಶೇ.42.9 ರಷ್ಟು ಕಡಿಮೆಯಾಗಿರುವುದು ಸಾಬೀತಾಗಿದೆ.
ವೆಚ್ಚ ಹೆಚ್ಚಳ
ಬೆಲೆ ಕಡಿಮೆ ಇದ್ದರೂ ಮೈಲೇಜ್ ಭಾರಿ ಪ್ರಮಾಣದಲ್ಲಿ ಕುಸಿದಿರುವುದರಿಂದ ವಾಹನ ಚಾಲನೆಯ ವೆಚ್ಚ (Running Cost) ಹೆಚ್ಚಾಗುತ್ತದೆ. ಇ20 ಇಂಧನ ಬಳಸಿದಾಗ ಪ್ರತಿ ಕಿಲೋಮೀಟರ್‌ಗೆ ಕೇವಲ 2 ರೂಪಾಯಿ ವೆಚ್ಚ ಬಂದರೆ, ಇ85 ಇಂಧನದಲ್ಲಿ ಈ ವೆಚ್ಚ ಪ್ರತಿ ಕಿಲೋಮೀಟರ್‌ಗೆ 2.82 ರೂ.ಗೆ ಏರಿಕೆಯಾಗುತ್ತದೆ. ಅಂದರೆ ಪ್ರತಿ 100 ಕಿಲೋಮೀಟರ್ ಸಂಚಾರಕ್ಕೆ ಇ20 ನಲ್ಲಿ 200 ರೂ. ಖರ್ಚಾದರೆ, ಇ85 ಇಂಧನಕ್ಕೆ 282 ರೂ. ಖರ್ಚಾಗುತ್ತದೆ. ಒಟ್ಟಾರೆಯಾಗಿ ಪ್ರತಿ 1,000 ಕಿಲೋಮೀಟರ್ ಸಂಚಾರಕ್ಕೆ ಇ85 ಬಳಸುವ ಸವಾರರು ಸುಮಾರು 818 ರೂ.ಗಳಷ್ಟು ಹೆಚ್ವು ಹಣವನ್ನು ವ್ಯಯಿಸಬೇಕಾಗುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಇ85 ಲಾಭದಾಯಕವೇ?
ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಕೇವಲ ಹಣ ಉಳಿಸುವ ಉದ್ದೇಶ ಹೊಂದಿರುವ ವಾಹನ ಸವಾರರಿಗೆ ಇ20 ಇಂಧನವೇ ಅತ್ಯಂತ ಆರ್ಥಿಕ ಮತ್ತು ಸೂಕ್ತ ಆಯ್ಕೆಯಾಗಿದೆ. ಇ85 ಇಂಧನವು ಪರಿಸರ ಸ್ನೇಹಿ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಿದೆಯಾದರೂ, ಸವಾರರ ಜೇಬಿಗೆ ಇದು ಹೊರೆಯಾಗಲಿದೆ. ಇದರೊಂದಿಗೆ ಫ್ಲೆಕ್ಸ್ ಫ್ಯುಯೆಲ್ ವಾಹನಗಳ ಖರೀದಿಯ ಬೆಲೆಯೂ ಸಾಮಾನ್ಯ ವಾಹನಗಳಿಗಿಂತ ಹೆಚ್ಚಾಗಿದೆ. ಸುಜುಕಿ ಗಿಕ್ಸರ್ ಫ್ಲೆಕ್ಸ್ ಫ್ಯುಯೆಲ್ ಬೈಕ್ ಸಾಮಾನ್ಯ ಮಾದರಿಗಿಂತ 8,000 ರೂ. ದುಬಾರಿಯಾಗಿದ್ದರೆ, ಮಾರುತಿ ಸುಜುಕಿ ವ್ಯಾಗನ್ ಆರ್ ಫ್ಲೆಕ್ಸ್ ಫ್ಯುಯೆಲ್ ಕಾರಿನ ಬೆಲೆ ಸಾಮಾನ್ಯ ಕಾರಿಗಿಂತ ಬರೋಬ್ಬರಿ 86,000 ರೂ. ಹೆಚ್ಚು. ಹೀಗಾಗಿ, ಭವಿಷ್ಯದಲ್ಲಿ ಇ85 ಇಂಧನವು ಗ್ರಾಹಕರಿಗೆ ಆರ್ಥಿಕವಾಗಿ ಲಾಭದಾಯಕವಾಗಬೇಕಾದರೆ, ಅದರ ಮಾರಾಟ ಬೆಲೆಯನ್ನು ಇ20 ಗಿಂತ ಇನ್ನೂ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಸುವುದು ಅನಿವಾರ್ಯವಾಗಿದೆ.



















