ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (EPFO) ಇತ್ತೀಚಿನ ನಿರ್ಧಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪಿಎಫ್ ವೇತನ ಮಿತಿಯನ್ನು 15 ಸಾವಿರ ರೂಪಾಯಿಯಿಂದ 25 ಸಾವಿರ ರೂಪಾಯಿಗೆ ಇಪಿಎಫ್ಒ ಏರಿಕೆ ಮಾಡಿದೆ. ಆದರೆ, ಈ ಹೊಸ ಬದಲಾವಣೆಯ ನಂತರ ಕಂಪನಿಗಳು ಉದ್ಯೋಗಿಗಳ ಕೈಗೆ ಸಿಗುವ ಸಂಬಳವನ್ನು (Take-home salary) ಕಡಿಮೆ ಮಾಡಬಾರದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕಂಪನಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಇದು ಖಾಸಗಿ ಕಂಪನಿ ಉದ್ಯೋಗಿಗಳಿಗೆ ವರದಾನವಾಗಲಿದೆ.
ವೇತನ ಮಿತಿ ಹೆಚ್ಚಳದಿಂದ ಉದ್ಯೋಗದಾತರ ಮೇಲೆ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು, ಕಂಪನಿಗಳು ಉದ್ಯೋಗಿಗಳ ಒಟ್ಟು ವೆಚ್ಚದ (ಸಿಟಿಸಿ) ಲೆಕ್ಕಾಚಾರದಲ್ಲಿ ಸರಿಹೊಂದಿಸುವ ಮೂಲಕ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸಲು ಯೋಚಿಸುತ್ತಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಎಚ್ಚೆತ್ತುಕೊಂಡಿರುವ ಸಚಿವಾಲಯ, ಕಂಪನಿಗಳು ಈ ರೀತಿ ಉದ್ಯೋಗಿಗಳ ವೇತನವನ್ನು ಕಡಿತಗೊಳಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಂಪನಿಗಳು ತಮ್ಮ ಶಾಸನಬದ್ಧ ಕೊಡುಗೆಯನ್ನು ತಮ್ಮ ಸ್ವಂತ ವೆಚ್ಚವೆಂದು ಪರಿಗಣಿಸಿ ಭರಿಸಬೇಕೇ ಹೊರತು, ಅದನ್ನು ಉದ್ಯೋಗಿಗಳ ಸಂಬಳದಿಂದ ಕಡಿತಗೊಳಿಸುವ ಮೂಲಕ ವರ್ಗಾಯಿಸಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ವೇತನ ಮಿತಿ ಹೆಚ್ಚಳದಿಂದ ಉದ್ಯೋಗಿಗಳಿಗೆ ಆರಂಭದಲ್ಲಿ ಕೈಗೆ ಸಿಗುವ ಸಂಬಳದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರೂ, ಇದು ದೀರ್ಘಕಾಲದಲ್ಲಿ ಲಾಭದಾಯಕವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಉದ್ಯೋಗಿಗಳ ಪಿಎಫ್ ಖಾತೆಗೆ ಹೆಚ್ಚಿನ ಮೊತ್ತ ಜಮೆಯಾಗುವುದರಿಂದ ಅಧಿಕ ಬಡ್ಡಿ, ತೆರಿಗೆ ವಿನಾಯಿತಿ, ಖಚಿತವಾದ ಪಿಂಚಣಿ (ಇಪಿಎಸ್) ಮತ್ತು ಉಚಿತ ವಿಮಾ ಸೌಲಭ್ಯಗಳಂತಹ ಹಲವು ಸಾಮಾಜಿಕ ಭದ್ರತಾ ಪ್ರಯೋಜನಗಳು ದೊರೆಯಲಿವೆ. ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕಂಪನಿಗಳು ಪ್ರಧಾನ್ ಮಂತ್ರಿ ವಿಕಸಿತ ಭಾರತ ರೋಜ್‌ಯಾರ್ ಯೋಜನೆ (PMVBRY) ಅಡಿಯಲ್ಲಿ ಸಿಗುವ ಪ್ರೋತ್ಸಾಹಕಗಳನ್ನು ಬಳಸಿಕೊಳ್ಳಬಹುದು ಎಂದು ಸಚಿವಾಲಯ ಸಲಹೆ ನೀಡಿದೆ.
ಹೊಸದಾಗಿ ಕಡ್ಡಾಯ ವ್ಯಾಪ್ತಿಗೆ ಬರುವ ನೌಕರರನ್ನು ತಕ್ಷಣವೇ ಗುರುತಿಸಿ, ಅವರ ನೋಂದಣಿ ಹಾಗೂ ಲೆಕ್ಕಾಚಾರಗಳನ್ನು ಸರಿಯಾಗಿ ನಿರ್ವಹಿಸುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ. ಒಟ್ಟಾರೆಯಾಗಿ, ಉದ್ಯೋಗಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರದ ಈ ನಿರ್ಧಾರವು ಮಹತ್ವದ ಪಾತ್ರ ವಹಿಸಲಿದೆ.
ಇದನ್ನೂ ಓದಿ :ಕೇಂದ್ರ ಸರ್ಕಾರದ MECON ಸಂಸ್ಥೆಯಲ್ಲಿ 159 ಹುದ್ದೆಗಳ ನೇಮಕ : 67 ಸಾವಿರ ರೂ. ಸಂಬಳ!



















