ಬೆಂಗಳೂರು : ಬೆಂಗಳೂರು ಮಹಾನಗರದಲ್ಲಿ ದುಬಾರಿ ಕಲ್ಯಾಣ ಮಂಟಪಗಳ ಬಾಡಿಗೆ ದರದಿಂದ ಮಧ್ಯಮ, ಕೆಳಮಧ್ಯಮ ಹಾಗೂ ಬಡ ಕುಟುಂಬಗಳು ವಿವಾಹ, ನಿಶ್ಚಿತಾರ್ಥ ಮತ್ತು ಆರತಕ್ಷತೆಗಳಂತಹ ಶುಭ ಸಮಾರಂಭಗಳನ್ನು ನಡೆಸಲು ಎದುರಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದ ಎರಡು ಮಹತ್ವಾಕಾಂಕ್ಷಿ ಯೋಜನೆಗಳನ್ನು ನಿರ್ಮಿಸಲಾಗಿದೆ.

ಯಡಿಯೂರು ವಾರ್ಡ್‌ನ ಐತಿಹಾಸಿಕ ಯಡಿಯೂರು ಕೆರೆಯ ಎದುರು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸಂಪೂರ್ಣ ಹವಾನಿಯಂತ್ರಿತ “ಅ.ನ.ಕೃ. ಕನ್ವೆನ್ಷನ್ ಸೆಂಟರ್” ನಿರ್ಮಾಣಗೊಂಡಿದ್ದು, ಕಡಿಮೆ ವೆಚ್ಚದಲ್ಲಿ ವೈಭವಯುತ ಸಮಾರಂಭಗಳನ್ನು ಆಯೋಜಿಸಲು ಇದು ನೆರವಾಗಲಿದೆ.
ಇದರ ಜೊತೆಗೆ ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮಗಳು, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು, ಸಾಂಸ್ಕೃತಿಕ ಮತ್ತು ರಂಗಭೂಮಿ ಕಾರ್ಯಕ್ರಮಗಳು, ಶಾಲಾ-ಕಾಲೇಜುಗಳ ವಾರ್ಷಿಕೋತ್ಸವಗಳನ್ನು ಆಯೋಜಿಸಲು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಡಾ. ಪುನೀತ್ ರಾಜಕುಮಾರ್ ಆಡಿಟೋರಿಯಂ ಕೂಡ ನಿರ್ಮಿಸಲಾಗಿದೆ.

ಈ ಎರಡೂ ಯೋಜನೆಗಳ ಲೋಕಾರ್ಪಣೆ ಸಮಾರಂಭವು ಜೂನ್ 22, 2026ರ ಸೋಮವಾರ ಬೆಳಿಗ್ಗೆ 10:30ಕ್ಕೆ ನಡೆಯಲಿದ್ದು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ರಮೇಶ್ ಎನ್.ಆರ್. ಅವರು, ಕಲ್ಪನೆಗೂ ಮೀರಿದ ಈ ಎರಡು ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಿತವಾಗುತ್ತಿದ್ದು, ಉದ್ಘಾಟನಾ ಸಮಾರಂಭಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.



















