ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಯಾವುದೇ ನಗರದಲ್ಲಿ ಅಪಾರ್ಟ್ ಮೆಂಟ್ ಖರೀದಿಸಲು, ಮನೆ ಕಟ್ಟಲು ಗೃಹ ಸಾಲ ಪಡೆಯುವುದು ಅನಿವಾರ್ಯ. ಕೈಯಲ್ಲಿರುವ ಸೇವಿಂಗ್, ಹೂಡಿಕೆಯ ಹಣವನ್ನೆಲ್ಲ ಹೊಸ ಮನೆಗೆ ಸುರಿದರೂ ಸುಮಾರು 50 ಲಕ್ಷ ರೂಪಾಯಿವರೆಗೆ ಸಾಲ ಮಾಡುವವರ ಸಂಖ್ಯೆ ಜಾಸ್ತಿ ಇರುತ್ತದೆ. ಆದರೆ, 50 ಲಕ್ಷ ರೂಪಾಯಿ ಸಾಲ ಮಾಡಿದವರು ವರ್ಷಕ್ಕೆ ಒಂದು ಇಎಂಐ ಹೆಚ್ಚುವರಿಯಾಗಿ ಕಟ್ಟಿದರೂ ಕೊನೆಯಲ್ಲಿ 10-12 ಲಕ್ಷ ರೂಪಾಯಿ ಉಳಿಸಬಹುದಾಗಿದೆ.
ಹೌದು, ಗೃಹಸಾಲದಲ್ಲಿ ಪ್ರತಿ ವರ್ಷ ಒಂದು ಹೆಚ್ಚುವರಿ ಇಎಂಐ ಕಟ್ಟಿದರೆ, ಸಾಲದ ಅವಧಿ ಕಡಿಮೆಯಾಗುತ್ತದೆ ಮತ್ತು ಒಟ್ಟು ಬಡ್ಡಿಯಲ್ಲಿ ಗಮನಾರ್ಹ ಉಳಿತಾಯವಾಗಬಹುದು. ನಿಮ್ಮ ಸಾಲದ ಮೊತ್ತ 50 ಸಾವಿರ ರೂ. ಇದೆ ಎಂದಿಟ್ಟುಕೊಳ್ಳಿ. ನಿಮಗೆ ಶೇ.8.5ರಷ್ಟು ಬಡ್ಡಿ ದರ ಎಂದರೂ ತಿಂಗಳಿಗೆ 43,400 ರೂಪಾಯಿ ಇಎಂಐ ಕಟ್ಟಬೇಕು. ಅಂದರೆ, ನೀವು 20 ವರ್ಷಗಳ ಅವಧಿಗೆ ಸಾಲ ಪಡೆದಿದ್ದರೆ, ಇಷ್ಟೊಂದು ಇಎಂಐ ಕಟ್ಟಬೇಕಾಗುತ್ತದೆ.
ಸಾಮಾನ್ಯವಾಗಿ 20 ವರ್ಷಗಳಲ್ಲಿ ನೀವು ಒಟ್ಟು ಸುಮಾರು 1.04 ಕೋಟಿ ರೂಪಾಯಿ ಪಾವತಿಸುತ್ತೀರಿ, ಅದರಲ್ಲಿ ಸುಮಾರು 54 ಲಕ್ಷ ರೂಪಾಯಿ ಬಡ್ಡಿಯಾಗಿರುತ್ತದೆ. ಆದರೆ, ಪ್ರತಿ ವರ್ಷ ಒಂದು ಹೆಚ್ಚುವರಿ ಇಎಂಐ ಅಂದರೆ, 43,400 ರೂಪಾಯಿಯನ್ನು ಹೆಚ್ಚುವರಿಯಾಗಿ ಸಾಲಕ್ಕೆ ಪಾವತಿಸಿದರೆ, ಸಾಲದ ಅವಧಿಯಲ್ಲಿ ಸುಮಾರು 3–4 ವರ್ಷಗಳಷ್ಟು ಕಡಿಮೆಯಾಗಬಹುದು. ಬಡ್ಡಿಯಲ್ಲಿ ಸುಮಾರು 8–12 ಲಕ್ಷ ರೂಪಾಯಿವರೆಗೆ ಉಳಿತಾಯವಾಗಬಹುದು.
ಹಾಗಾಗಿ, ಹೊಸದಾಗಿ ಯಾರೇ ಸಾಲ ಮಾಡಿದರೂ, ಪ್ರತಿ ತಿಂಗಳು ಎಷ್ಟೇ ಇಎಂಐ ಇದ್ದರೂ, ವರ್ಷದಲ್ಲಿ ಒಂದು ಹೆಚ್ಚುವರಿ ಇಎಂಐ ಪಾವತಿಸುವುದರಿಂದ ಸಾಲದ ಅವಧಿಯೂ ಕಡಿಮೆಯಾಗುತ್ತದೆ, ಬಡ್ಡಿಯ ಹೊರೆಯೂ ಇಳಿಕೆಯಾಗುತ್ತದೆ. ಈಗಾಗಲೇ ಸಾಲ ಪಡೆದು, ಇಎಂಐ ಪಾವತಿಸುತ್ತಿರುವವರಿಗೂ ಇದು ಅನ್ವಯವಾಗುತ್ತದೆ. ಇದನ್ನು ಸ್ಮಾರ್ಟ್ ಇಎಂಐ ಪೇಮೆಂಟ್ ಎಂದು ಕೂಡ ಕರೆಯಲಾಗುತ್ತದೆ.



















