ಬೆಂಗಳೂರು: ದೇಶದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಕನಸಿಗೆ ಬೆನ್ನೆಲುಬಾಗಲು ಸೀತಾರಾಮ್ ಜಿಂದಾಲ್ ಫೌಂಡೇಷನ್ (Sitaram Jindal Foundation) ಸಂಸ್ಥೆಯು ‘ಸ್ಕಾಲರ್ ಶಿಪ್ ಯೋಜನೆ’ ಘೋಷಿಸಿದೆ. 11ನೇ ತರಗತಿಯಿಂದ ಹಿಡಿದು ಸ್ನಾತಕೋತ್ತರ ಪದವಿ (Post Graduation) ಹಾಗೂ ವೃತ್ತಿಪರ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನದ ಮೂಲಕ ಆರ್ಥಿಕ ನೆರವು ದೊರೆಯಲಿದೆ.
ಯೋಜನೆಯ ಪ್ರಮುಖ ಅಂಶಗಳು
ಯಾರಿಗೆಲ್ಲ ನೆರವು? 11ನೇ ತರಗತಿ, 12ನೇ ತರಗತಿ, ಐಟಿಐ, ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ವಿದ್ಯಾರ್ಥಿವೇತನದ ಮೊತ್ತ: ವಿದ್ಯಾರ್ಥಿಗಳು ಓದುತ್ತಿರುವ ಕೋರ್ಸ್ಗಳಿಗೆ ಅನುಗುಣವಾಗಿ ಪ್ರತಿ ತಿಂಗಳು 500 ರೂಪಾಯಿಯಿಂದ 3,200 ರೂಪಾಯಿವರೆಗೆ ಆರ್ಥಿಕ ಸಹಾಯ ನೇರವಾಗಿ ಲಭ್ಯವಾಗಲಿದೆ. ಅಲ್ಲದೆ, ಹಾಸ್ಟೆಲ್ ನಲ್ಲಿ ವಾಸವಾಗಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಭತ್ಯೆಯೂ ಸಿಗಲಿದೆ.
ಕುಟುಂಬದ ವಾರ್ಷಿಕ ಆದಾಯ ಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂಪಾಯಿ ಮೀರಬಾರದು. ಈ ಯೋಜನೆಗೆ ವರ್ಷವಿಡೀ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು ಫೌಂಡೇಶನ್ ನ ಅಧಿಕೃತ ವೆಬ್ ಸೈಟ್ ಆಗಿರುವ scholarship@sitaramjindalfoundation.org ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಅಗತ್ಯವಿರುವ ಮಾಹಿತಿ ಭರ್ತಿ ಮಾಡಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು (ಅಂಕಪಟ್ಟಿಗಳು, ಆದಾಯ ಪ್ರಮಾಣಪತ್ರ, ಪ್ರವೇಶಾತಿ ರಶೀದಿ ಇತ್ಯಾದಿ) ಲಗತ್ತಿಸಿ ಕೆಳಕಂಡ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿಕೊಡಬೇಕು.
ವಿಳಾಸ:
The Trustee,
Sitaram Jindal Foundation,
Jindal Nagar, Tumkur Road,
Bengaluru – 560073.


















