ಪಾಟ್ನಾ : ಬಿಹಾರದ ಬೆಗುಸರಾಯ್ ಜಿಲ್ಲೆಯಲ್ಲಿ ನಡೆದ ಅತ್ಯಂತ ಬರ್ಬರ ಮತ್ತು ಅಮಾನವೀಯ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಜೂನ್ 11 ರಂದು ಚಕಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಐವರು ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿ, ಮನೆಯ ಮಾಲೀಕರನ್ನು ಕೋಣೆಯೊಂದರಲ್ಲಿ ಬಂಧಿಸಿ, ಅವರ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ರಾತ್ರಿ 11:30ರ ಸುಮಾರಿಗೆ ನಡೆದ ಈ ಕೃತ್ಯದಲ್ಲಿ, ಮಹಿಳೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕ್ರೂರ ಕೃತ್ಯ ನಡೆಸಲಾಗಿದೆ. ಅಷ್ಟೇ ಅಲ್ಲದೆ, ಪ್ರಾಣಭಯದಿಂದ ಕೂಗಿಕೊಳ್ಳುತ್ತಿದ್ದ ಮಹಿಳೆಯ ಎದೆ ಮತ್ತು ತೊಡೆಯ ಭಾಗಗಳನ್ನು ಬ್ಲೇಡ್‌ನಿಂದ ಸೀಳಿ ದುಷ್ಕರ್ಮಿಗಳು ದೌರ್ಜನ್ಯ ಎಸಗಿದ್ದಾರೆ.
ವೈದ್ಯಕೀಯ ತಪಾಸಣೆಯಲ್ಲಿ ಹೊರಬಿತ್ತು ಭೀಕರ ಸತ್ಯ
ಘಟನೆಯ ನಂತರ ತೀವ್ರ ಅಸ್ವಸ್ಥರಾಗಿದ್ದ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರವೂ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಮತ್ತೆ ಸಾದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವಿವರವಾದ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಕಂಡ ದೃಶ್ಯ ನೋಡಿ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಮಹಿಳೆಯ ಖಾಸಗಿ ಅಂಗದೊಳಗೆ ಜೀವಂತ ಗುಂಡು (Live Bullet), ಒಂದು ಕಲ್ಲು ಮತ್ತು ಮರದ ತುಂಡು ಪತ್ತೆಯಾಗಿದೆ. ಇಷ್ಟು ಭೀಕರವಾಗಿ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯು, ತಾನು ಪ್ರಜ್ಞೆ ಕಳೆದುಕೊಂಡಿದ್ದರಿಂದ ಈ ವಸ್ತುಗಳನ್ನು ಆ ರಾಕ್ಷಸರು ತಮ್ಮ ದೇಹದೊಳಗೆ ತುರುಕಿದ್ದು ತಮಗೆ ಅರಿವಿಲ್ಲ ಎಂದು ಹೇಳಿಕೊಂಡಿದ್ದಾಳೆ.
ಆರೋಪಿಗಳ ಬಂಧನಕ್ಕೆ ಆಗ್ರಹ
ಸಂತ್ರಸ್ತ ಮಹಿಳೆಯು ಈ ಹಿಂದೆ ಮೂರು ತಿಂಗಳ ಹಿಂದೆಯೇ ತನ್ನ ಮನೆಗೆ ನುಗ್ಗಿ ಕಳ್ಳರು ದೌರ್ಜನ್ಯವೆಸಗಲು ಪ್ರಯತ್ನಿಸಿದ್ದರು ಎಂದು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಹಣ ಮತ್ತು ಆಭರಣಗಳನ್ನು ದೋಚಿದ್ದಲ್ಲದೆ, ಲೈಂಗಿಕ ದೌರ್ಜನ್ಯಕ್ಕೂ ಯತ್ನಿಸಿದ್ದರು. ಆದರೆ, ಆಗಲೇ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದೀಗ ನಡೆದಿರುವ ಈ ಭೀಕರ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಸ್‌ಪಿ ಆನಂದ್ ಕುಮಾರ್ ಪಾಂಡೆ ಅವರು, ವೈಜ್ಞಾನಿಕ ತನಿಖೆ ನಡೆಯುತ್ತಿದೆ ಮತ್ತು ಸಂತ್ರಸ್ತೆಯ ಹೇಳಿಕೆ ಸತ್ಯವೆಂದು ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ. ತಪ್ಪು ಮಾಡಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಮತ್ತು ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಮೂರೇ ತಿಂಗಳಲ್ಲಿ ಎಂಟು ಸಾವು : ಛತ್ತೀಸ್‌ಗಢದ ಹಳ್ಳಿಯಲ್ಲಿ ಮಂತ್ರ-ತಂತ್ರ, ವಿಷಪ್ರಾಷನದ ಭೀತಿ!



















