ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಚಂದಾದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ನಿಮ್ಮ ಪಿಎಫ್ (PF) ಖಾತೆಯಲ್ಲಿ ಹೆಸರು, ಜನ್ಮ ದಿನಾಂಕ ಅಥವಾ ಲಿಂಗ ಸೇರಿ ಯಾವುದೇ ವಿವರಗಳು ತಪ್ಪಾಗಿದ್ದರೆ, ಹಣ ಹಿಂಪಡೆಯುವಾಗ (Claim Settlement/Withdrawal) ಅಥವಾ ಖಾತೆ ವರ್ಗಾವಣೆ ಮಾಡುವಾಗ ನಿಮ್ಮ ಹಣ ಹೋಲ್ಡ್ ಆಗುವ ಸಾಧ್ಯತೆಯಿರುತ್ತದೆ. ಹಾಗಾಗಿ, ಕೂಡಲೇ ಅಪ್ ಡೇಟ್ ಮಾಡಿಕೊಳ್ಳುವಂತೆ ಇಪಿಎಫ್ಒ ಮಾಹಿತಿ ನೀಡಿದೆ.
ಈ ಸಮಸ್ಯೆಯನ್ನು ಪರಿಹರಿಸಲು ಇಪಿಎಫ್ಒ ಆನ್ ಲೈನ್ ಜಾಯಿಂಟ್ ಡಿಕ್ಲರೇಷನ್ ಸೌಲಭ್ಯವನ್ನು ಒದಗಿಸಿದೆ. ಇದರ ಸಹಾಯದಿಂದ ಸದಸ್ಯರು ಕಚೇರಿಗಳಿಗೆ ಅಲೆಯದೆ ಮನೆಯಲ್ಲೇ ಕುಳಿತು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದು.
ಆನ್ ಲೈನ್ ನಲ್ಲಿ ಪಿಎಫ್ ವಿವರ ಸರಿಪಡಿಸಲು 5 ಸುಲಭ ಹಂತಗಳು:
• ಇಪಿಎಫ್ಒ ಪೋರ್ಟಲ್ ಗೆ ಭೇಟಿ ನೀಡಿ, ನಿಮ್ಮ ಯುಎಎನ್ ಸಂಖ್ಯೆ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
• ಲಾಗಿನ್ ಆದ ನಂತರ, ಪೋರ್ಟಲ್ ನಲ್ಲಿರುವ ಜಾಯಿಂಟ್ ಡಿಕ್ಲರೇಷನ್ ಸೌಲಭ್ಯದ ಮೇಲೆ ಕ್ಲಿಕ್ ಮಾಡಿ.
• ನೀವು ಬದಲಾಯಿಸಲು ಬಯಸುವ ಮಾಹಿತಿಯನ್ನು ಆಯ್ಕೆ ಮಾಡಿ ಮತ್ತು ಸರಿಯಾದ ಮಾಹಿತಿ ಒದಗಿಸಿ.
• ಸರಿಯಾದ ಮಾಹಿತಿಯ ದೃಢೀಕರಣಕ್ಕಾಗಿ ಆಧಾರ್, ಪ್ಯಾನ್ ಮತ್ತು ಜನನ ಪ್ರಮಾಣಪತ್ರದಂತಹ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
• ನಮೂದಿಸಿದ ಎಲ್ಲ ವಿವರಗಳು ಮತ್ತು ಅಪ್ ಲೋಡ್ ಮಾಡಿದ ದಾಖಲೆಗಳನ್ನು ಪರಿಶೀಲಿಸಿದ ನಂತರ ಸಬ್ ಮಿಟ್ ಕೊಡಿ.
ದಾಖಲೆಗಳೊಂದಿಗೆ ಮಾಹಿತಿ ತಾಳೆಯಾಗಬೇಕು
ನೀವು ಅಪ್ ಡೇಟ್ ಮಾಡಲು ಬಯಸುವ ಮಾಹಿತಿಗೆ ಅನುಗುಣವಾಗಿ ಮಾನ್ಯ ಸರ್ಕಾರಿ ಗುರುತಿನ ದಾಖಲೆಯನ್ನು ಅಪ್ ಲೋಡ್ ಮಾಡಬೇಕು. ನಮೂದಿಸುತ್ತಿರುವ ವಿವರಗಳು ಅಪ್ ಲೋಡ್ ಮಾಡುತ್ತಿರುವ ದಾಖಲೆಗೆ ನಿಖರವಾಗಿ ಹೊಂದಿಕೆಯಾಗಬೇಕು ಎಂಬುದನ್ನು ಗಮನಿಸಿ.
ಆನ್ಲೈನ್ನಲ್ಲಿ ವಿನಂತಿ ಸಲ್ಲಿಸಿದ ನಂತರದ ಪ್ರಕ್ರಿಯೆ:
ನೀವು ಮೆಂಬರ್ ಪೋರ್ಟಲ್ ನಲ್ಲಿ ಕರೆಕ್ಷನ್ ರಿಕ್ವೆಸ್ಟ್ ಮತ್ತು ದಾಖಲೆಗಳನ್ನು ಸಲ್ಲಿಸಿದ ನಂತರ, ಆ ವಿನಂತಿಯು ಪರಿಶೀಲನೆಗಾಗಿ ಕಳುಹಿಸಲಾಗುತ್ತದೆ. ಇಪಿಎಫ್ಒ ನಿಯಮಗಳ ಪ್ರಕಾರ ನಿಮ್ಮ ವಿವರಗಳನ್ನು ಪರಿಶೀಲಿಸಿದ ಬಳಿಕ ಡೇಟಾ ಅಪ್ ಡೇಟ್ ಆಗುತ್ತದೆ.
ಪಿಎಫ್ ಕ್ಲೇಮ್ ತಿರಸ್ಕೃತಗೊಳ್ಳದಂತೆ ತಡೆಯುವುದು ಹೇಗೆ?
• ಯುಎಎನ್-ಆಧಾರ್ ಜೋಡಣೆ: ನಿಮ್ಮ ಯುಎಎನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಎರಡರಲ್ಲೂ ನಿಮ್ಮ ಹೆಸರಿನ ಸ್ಪೆಲ್ಲಿಂಗ್ ಒಂದೇ ಆಗಿರಬೇಕು.
• ಬ್ಯಾಂಕ್ ವಿವರಗಳ ಪರಿಶೀಲನೆ: ನಿಮ್ಮ ಬ್ಯಾಂಕ್ ಖಾತೆಯ ಐಎಫ್ಎಸ್ಸಿ ಕೋಡ್ ಮತ್ತು ಖಾತೆ ಸಂಖ್ಯೆಯನ್ನು ಸರಿಯಾಗಿ ನವೀಕರಿಸಿ.
• ಮೊಬೈಲ್ ಸಂಖ್ಯೆ: ಒಟಿಪಿ ಪರಿಶೀಲನೆ ವೇಳೆ ಯಾವುದೇ ತೊಂದರೆ ಎದುರಾಗದಂತೆ ಪೋರ್ಟಲ್ ನಲ್ಲಿ ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿ.


















