ತಾನೇ ಸೃಷ್ಟಿಸಿದ ಭಯೋತ್ಪಾದಕ ಜಾಲದಿಂದಲೇ ಪಾಕಿಸ್ತಾನ ಇಂದು ತತ್ತರಿಸುತ್ತಿದ್ದು, ಇದು ಒಂದು ರೀತಿಯಲ್ಲಿ “ಫ್ರಾಂಕೆನ್‌ಸ್ಟೈನ್” (Frankenstein) ಸ್ಥಿತಿಯಾಗಿದೆ. ಇದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC) ಅಧಿವೇಶನದಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿ ಅನುಪಮಾ ಸಿಂಗ್ ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಪರಿ.
ಪಾಕ್ ವಿರುದ್ಧ ಜಾಗತಿಕ ವೇದಿಕೆಯಲ್ಲಿ ಹರಿಹಾಯ್ದ ಅನುಪಮಾ ಸಿಂಗ್, ಆ ದೇಶದಲ್ಲಿ ಒಂದೆಡೆ ತಮ್ಮ ರಕ್ಷಣಾ ಸಚಿವರೇ ಭಯೋತ್ಪಾದಕರನ್ನು ಪೋಷಿಸಿದ್ದೇವೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಾರೆ, ಇನ್ನೊಂದೆಡೆ ಅದೇ ದೇಶವು ತಾವು ಭಯೋತ್ಪಾದನೆಯ ಸಂತ್ರಸ್ತರು ಎಂದು ಜಗತ್ತಿನ ಮುಂದೆ ನಾಟಕವಾಡುತ್ತಿದೆ ಎಂದರು. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಕಳೆದ ವರ್ಷ ನೀಡಿದ್ದ ಹೇಳಿಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ಪಾಕಿಸ್ತಾನ ಕಳೆದ ಮೂರು ದಶಕಗಳಿಂದ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ಮತ್ತು ಆರ್ಥಿಕ ನೆರವು ನೀಡುತ್ತಿರುವುದನ್ನು ಜಗತ್ತು ಮರೆತಿಲ್ಲ ಎಂದು ಸ್ಮರಿಸಿದರು.
ಪಿಒಕೆ ದೌರ್ಜನ್ಯಗಳ ವಿಚಾರ ಬಿಚ್ಚಿಟ್ಟ ಭಾರತ
ಭಾರತದ ರಾಜತಾಂತ್ರಿಕ ಅಧಿಕಾರಿ ಅನುಪಮಾ ಸಿಂಗ್ ಅವರು ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ನಡೆಯುತ್ತಿರುವ ಭೀಕರ ಪರಿಸ್ಥಿತಿಯತ್ತ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದ್ದಾರೆ. ರಾವಲ್‌ಕೋಟ್ ಸೇರಿದಂತೆ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಅತಿಯಾದ ವಿದ್ಯುತ್ ದರ ಮತ್ತು ಆರ್ಥಿಕ ಮುಗ್ಗಟ್ಟಿನ ವಿರುದ್ಧ ಜನಸಾಮಾನ್ಯರು ನಡೆಸುತ್ತಿರುವ ಪ್ರತಿಭಟನೆಗಳನ್ನು ಪಾಕಿಸ್ತಾನದ ಸೈನ್ಯವು ಕ್ರೂರವಾಗಿ ಹತ್ತಿಕ್ಕುತ್ತಿದೆ ಎಂದು ಸಿಂಗ್ ಆರೋಪಿಸಿದ್ದಾರೆ.
ಕೇವಲ ಅನ್ನಕ್ಕಾಗಿ ಆಗ್ರಹಿಸುತ್ತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಲಾಗುತ್ತಿದೆ, ಇದು ಅಲ್ಲಿನ ಆಡಳಿತದ ಕ್ರೌರ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ದೂರಿದರು. ಈ ದಮನಕಾರಿ ಕ್ರಮಗಳಲ್ಲಿ 16 ಮಂದಿ ನಾಗರಿಕರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿರುವ ವರದಿಗಳಿವೆ. ಸಂವಹನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಅಗತ್ಯ ವಸ್ತುಗಳ ಪೂರೈಕೆಯನ್ನು ತಡೆಯುವ ಮೂಲಕ ಪಾಕಿಸ್ತಾನ ಸರ್ಕಾರವು ಆ ಭಾಗದ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಅವರು ಸಭೆಯಲ್ಲಿ ವಿವರಿಸಿದರು.
ಪಾಕ್ ಅಪಪ್ರಚಾರಕ್ಕೆ ಭಾರತದ ಖಡಕ್ ತಿರುಗೇಟು
ಪಾಕಿಸ್ತಾನದ ಆಂತರಿಕ ವೈಫಲ್ಯಗಳನ್ನು ಮರೆಮಾಚಲು ಆ ದೇಶವು ಕಾಶ್ಮೀರ ವಿಷಯವನ್ನು ಪದೇ ಪದೇ ಬಳಸಿಕೊಳ್ಳುತ್ತಿದೆ ಎಂದು ಅನುಪಮಾ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು. ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವ ಬದಲು, ಮೊದಲು ತಮ್ಮದೇ ದೇಶದ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವತ್ತ ಪಾಕಿಸ್ತಾನ ಗಮನಹರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ವಿಷಯದಲ್ಲಿ ಯಾವುದೇ ಚರ್ಚೆಗೆ ಅವಕಾಶವಿಲ್ಲ ಎಂದು ಭಾರತ ತನ್ನ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದೆ. ಪಾಕಿಸ್ತಾನವು ಭಾರತದ ಭೂಭಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವುದೇ ನೈಜ ಸಮಸ್ಯೆ. ಅದನ್ನು ಕೂಡಲೇ ಆ ದೇಶ ಹಿಂದಿರುಗಿಸಲಿ ಎಂದು ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಆಗ್ರಹಿಸಿದರು. ತನ್ನ ದೇಶದ ಜನರ ಹಸಿವು ಮತ್ತು ಹಕ್ಕಿನ ಧ್ವನಿಯನ್ನು ಅಡಗಿಸಿ, ನೆರೆಯ ದೇಶದ ವಿರುದ್ಧ ಸುಳ್ಳು ಪ್ರಚಾರ ನಡೆಸುವ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ದಿಕ್ಕು ತಪ್ಪಿಸುವ ಪಾಕಿಸ್ತಾನದ ತಂತ್ರಗಳನ್ನು ಅವರು ಜಗತ್ತಿನೆದುರು ಬಯಲು ಮಾಡಿದರು.
ಇದನ್ನೂ ಓದಿ : ಮೂರೇ ತಿಂಗಳಲ್ಲಿ ಎಂಟು ಸಾವು : ಛತ್ತೀಸ್‌ಗಢದ ಹಳ್ಳಿಯಲ್ಲಿ ಮಂತ್ರ-ತಂತ್ರ, ವಿಷಪ್ರಾಷನದ ಭೀತಿ!



















