ಬೆಂಗಳೂರು : ರಾಜ್ಯದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹಾಲಿನ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ದಾಖಲೆಯ ಸಂಗ್ರಹಣೆ ಕಂಡುಬಂದಿದೆ.
ಜೂನ್ 13 ರಂದು ಕೆಎಂಎಫ್‌ನ 16 ಹಾಲು ಒಕ್ಕೂಟಗಳಲ್ಲಿ ಒಟ್ಟು 1.16 ಕೋಟಿ ಲೀಟರ್ ಹಾಲು ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 1.04 ಕೋಟಿ ಲೀಟರ್ ಆಗಿತ್ತು. ಈ ವರ್ಷ ಗಮನಾರ್ಹ ಪ್ರಮಾಣದ ಹೆಚ್ಚಳ ದಾಖಲಾಗಿದೆ.
ಬೇಸಿಗೆಯ ತೀವ್ರ ಉಷ್ಣಾಂಶದ ನಡುವೆಯೂ ಹಾಲಿನ ಉತ್ಪಾದನೆ ಕುಸಿಯದೇ ಸ್ಥಿರವಾಗಿರುವುದು ವಿಶೇಷವಾಗಿದೆ. ಮಳೆಗಾಲದ ಆರಂಭದೊಂದಿಗೆ ಉತ್ಪಾದನೆ ಮತ್ತಷ್ಟು ವೇಗ ಪಡೆದಿದೆ. ಪ್ರಸ್ತುತ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಸರಾಸರಿ 35.50 ದರ ದೊರೆಯುತ್ತಿದ್ದು, ಇದರೊಂದಿಗೆ ರಾಜ್ಯ ಸರ್ಕಾರದ 5 ಪ್ರೋತ್ಸಾಹಧನ ಸೇರಿ ಲೀಟರ್‌ಗೆ 40ಕ್ಕಿಂತ ಹೆಚ್ಚು ಆದಾಯ ಸಿಗುತ್ತಿದೆ.
ಉತ್ತಮ ಆದಾಯದ ಕಾರಣ ಯುವಕರು ಸೇರಿದಂತೆ ಹೆಚ್ಚಿನ ರೈತರು ಹೈನುಗಾರಿಕೆಯತ್ತ ಆಕರ್ಷಿತರಾಗುತ್ತಿದ್ದು, ಇದರಿಂದ ಹಾಲು ಉತ್ಪಾದನೆಯೂ ನಿರಂತರವಾಗಿ ಹೆಚ್ಚುತ್ತಿದೆ.
ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ವಿವಿಧ ಹಾಲು ಉತ್ಪನ್ನಗಳಿಗೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಪ್ರತಿದಿನ ಲಕ್ಷಾಂತರ ಲೀಟರ್ ಹಾಲು ಹೊರರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಬೆಂಗಳೂರು, ಹಾಸನ, ಮಂಡ್ಯ, ತುಮಕೂರು, ಮೈಸೂರು, ಶಿವಮೊಗ್ಗ ಹಾಗೂ ಕೋಲಾರ ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲಿನ ಉತ್ಪಾದನೆ ನಿರಂತರ ಏರಿಕೆಯಾಗುತ್ತಿದೆ.
ವಿಶೇಷವಾಗಿ ಶಿವಮೊಗ್ಗ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 1 ಲಕ್ಷ ಲೀಟರ್ ಹಾಲಿನ ಉತ್ಪಾದನೆ ಹೆಚ್ಚಳವಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ, ಮುಂಬರುವ ಅಕ್ಟೋಬರ್ ವೇಳೆಗೆ ರಾಜ್ಯದ ಹಾಲು ಉತ್ಪಾದನೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ. ಗ್ರಾಮೀಣ ಆರ್ಥಿಕತೆಯ ಪ್ರಮುಖ ಆಧಾರವಾಗಿರುವ ಹೈನುಗಾರಿಕೆ, ರೈತರ ಆದಾಯ ಹೆಚ್ಚಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ನೆರವಾಗುತ್ತಿದ್ದು, ಕೃಷಿಗೆ ಪೂರಕ ವಲಯವಾಗಿ ಮತ್ತಷ್ಟು ಬಲ ಪಡೆಯುತ್ತಿದೆ.
ಇದನ್ನೂ ಓದಿ : SLR ಕಂಪನಿ ವಿರುದ್ಧ ಗ್ರಾಮಸ್ಥರ ಆಕ್ರೋಶ : ವಿಜಯನಗರ ಡಿಸಿ ಕಚೇರಿವರೆಗೆ 2 ದಿನಗಳ ಪಾದಯಾತ್ರೆ



















