ಬೆಂಗಳೂರು : ರಾಜ್ಯದ ವಸತಿ ಶಾಲೆಗಳಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ, ಬಾಲಕಿಯರ ಗರ್ಭಧಾರಣೆ ಹಾಗೂ ವಿವಿಧ ಆಡಳಿತಾತ್ಮಕ ವೈಫಲ್ಯಗಳ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ರಾಷ್ಟ್ರೀಯ ಅಂಬೇಡ್ಕರ್ ಸೇನೆ ಆಗ್ರಹಿಸಿದೆ. ಈ ಸಂಬಂಧ ಸಂಘಟನೆಯ ಅಧ್ಯಕ್ಷ ಅರ್ಜುನ್ ಗೋಪಾಲಯ್ಯ ಅವರ ನೇತೃತ್ವದಲ್ಲಿ ಜೂನ್ 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಂಜಿನ ಮೆರವಣಿಗೆ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲ ಇಲಾಖೆಯಾಗಿದ್ದು, ಅಕ್ಷರ ಹಾಗೂ ಅವಕಾಶ ವಂಚಿತ ಸಮುದಾಯಗಳ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿ ಹೊಂದಿದೆ. ಆದರೆ, ನಿಕಟಪೂರ್ವ ಸಚಿವರ ಅವಧಿಯಲ್ಲಿ ವಸತಿ ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ, ಬಾಲಕಿಯರಲ್ಲಿ ಗರ್ಭಧಾರಣೆ, ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ರಾಷ್ಟ್ರೀಯ ಅಂಬೇಡ್ಕರ್ ಸೇನೆ ಆರೋಪಿಸಿದೆ.
ಇದೇ ಅವಧಿಯಲ್ಲಿ ವಸತಿ ಶಾಲೆಗಳ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಪತ್ತೆಯಾದ ಪ್ರಕರಣಗಳು ನಡೆದಿದ್ದವು. ಅಲ್ಲದೆ, ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ (ED) ದಾಳಿಗಳು ನಡೆದಿದ್ದರೂ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದೆ, ಕಳಂಕಿತ ಅಧಿಕಾರಿಗಳಿಗೆ ರಕ್ಷಣೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಪ್ರತಿಭಟನೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿ ಎಸ್‌ಸಿಪಿ/ಟಿಎಸ್ಸಿಪಿ (SCSP/TSP) ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಸುಮಾರು 53 ಸಾವಿರ ಕೋಟಿ ರೂಪಾಯಿ ನಿಧಿಯನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಳಸಿದ ವಿಚಾರವನ್ನು ರಾಷ್ಟ್ರೀಯ ಅಂಬೇಡ್ಕರ್ ಸೇನೆ ಉಲ್ಲೇಖಿಸಿದ್ದು, ಈ ಸಂದರ್ಭದಲ್ಲಿ ಸಮುದಾಯದ ಪರವಾಗಿ ಧ್ವನಿ ಎತ್ತುವಲ್ಲಿ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಚ್. ರಂಗಾಪುರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆವರಣದಲ್ಲಿ 70ಕ್ಕೂ ಹೆಚ್ಚು ಗೋಧಿ ಚೀಲಗಳನ್ನು ಕಾನೂನುಬಾಹಿರವಾಗಿ ಮಣ್ಣಿನಲ್ಲಿ ಹೂತು ಹಾಕಿದ ಪ್ರಕರಣವೂ ಇದೇ ಅವಧಿಯಲ್ಲಿ ಬೆಳಕಿಗೆ ಬಂದಿತ್ತು. ಇದು ಇಲಾಖೆಯಲ್ಲಿನ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಉದಾಹರಣೆಯಾಗಿದೆ.
ಯಾದಗಿರಿ ಹಾಗೂ ಚಿಂತಾಮಣಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಮತ್ತು ಗರ್ಭಧಾರಣೆಯಂತಹ ಗಂಭೀರ ಘಟನೆಗಳು ನಡೆದಿರುವುದು ವಿದ್ಯಾರ್ಥಿಗಳ ಸುರಕ್ಷತೆಯ ವಿಚಾರದಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಇದಲ್ಲದೆ, ಕೆಐಎಸ್ (KIS) ಸಂಸ್ಥೆಯ ಸೂಪರಿಂಟೆಂಡೆಂಟ್ ಎ.ಇ. ಜನಾರ್ದನ್ ಅವರ ವಿರುದ್ಧ ಲೋಕಾಯುಕ್ತ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚಿದರೂ, ಉನ್ನತ ಆಡಳಿತವು ಅವರಿಗೆ ರಕ್ಷಣೆ ನೀಡುತ್ತಿದೆ ಎಂಬ ಆರೋಪವನ್ನು ರಾಷ್ಟ್ರೀಯ ಅಂಬೇಡ್ಕರ್ ಸೇನೆ ಮುಂದಿಟ್ಟಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರನ್ನು ಮತ್ತೆ ಸಚಿವ ಸ್ಥಾನ ನೀಡಬಾರದೆಂದು ಆಗ್ರಹಿಸಿ, ರಾಷ್ಟ್ರೀಯ ಅಂಬೇಡ್ಕರ್ ಸೇನೆ ಜೂನ್ 17ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಕೇಂದ್ರದಿಂದ ಮಾಸಿಕ 20 ಸಾವಿರ ರೂ. ಆದಾಯ : ಇಷ್ಟು ಹೂಡಿಕೆ ಮಾಡಿದರೆ ಟೆನ್ಶನ್ ಫ್ರೀ



















