ಚೆನ್ನೈ : ಪ್ರತಿಪಕ್ಷಗಳ ಇಂಡಿಯಾ (INDIA) ಒಕ್ಕೂಟದಲ್ಲಿ ಈಗ ಭಾರೀ ಬಿರುಕು ಮೂಡಿದ್ದು, ದಶಕಗಳ ಕಾಲ ಆಪ್ತ ಮಿತ್ರನಾಗಿದ್ದ ಡಿಎಂಕೆ (DMK) ಇದೀಗ ಕಾಂಗ್ರೆಸ್ ಮತ್ತು ಸಂಸದ ರಾಹುಲ್ ಗಾಂಧಿ ವಿರುದ್ಧ ಬಹಿರಂಗವಾಗಿ ಯುದ್ಧ ಸಾರಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಯಲ್ಲೇ ಇದ್ದುಕೊಂಡು ಕಾಂಗ್ರೆಸ್ ಪಕ್ಷವು ಡಿಎಂಕೆಯ ಬೆನ್ನಿಗೆ ಇರಿದಿದೆ ಎಂದು ಡಿಎಂಕೆ ಗಂಭೀರ ಆರೋಪ ಮಾಡಿದೆ. ರಾಜ್ಯ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕಲು ಕಾಂಗ್ರೆಸ್ ನಕಲಿ ತಂತ್ರಗಳನ್ನು ಬಳಸುತ್ತದೆ ಮತ್ತು ಲೋಕಸಭಾ ಚುನಾವಣೆ ಬಂದಾಗ ಮಾತ್ರ ಅದೇ ಪಕ್ಷಗಳ ಬೆಂಬಲಕ್ಕಾಗಿ ಅಂಗಲಾಚುತ್ತದೆ ಎಂದು ಡಿಎಂಕೆ ಕಿಡಿಕಾರಿದೆ. ರಾಹುಲ್ ಗಾಂಧಿ ಅವರ ಕೃಪಾಕಟಾಕ್ಷದಿಂದಲೇ ತಮಿಳುನಾಡಿನಲ್ಲಿ ಈ ದ್ರೋಹ ನಡೆದಿದೆ ಎಂದೂ ಆರೋಪಿಸಿದೆ.
‘ಮುರಸೋಲಿ’ ಪತ್ರಿಕೆಯಲ್ಲಿ ರಾಹುಲ್ ಗಾಂಧಿಗೆ ಲೇವಡಿ
ಡಿಎಂಕೆ ಪಕ್ಷದ ಅಧಿಕೃತ ಮುಖವಾಣಿಯಾದ ‘ಮುರಸೋಲಿ’ (Murasoli) ದಿನಪತ್ರಿಕೆಯ ಸಂಪಾದಕೀಯದಲ್ಲಿ ರಾಹುಲ್ ಗಾಂಧಿ ಅವರ ರಾಜಕೀಯ ವರ್ತನೆಯನ್ನು ತೀವ್ರವಾಗಿ ಲೇವಡಿ ಮಾಡಲಾಗಿದೆ.ಇತ್ತೀಚೆಗೆ ನಡೆದ ಒಕ್ಕೂಟದ ಸಭೆಯಲ್ಲಿ ರಾಹುಲ್ ಗಾಂಧಿ ಒಗ್ಗಟ್ಟಿನ ಬಗ್ಗೆ ಮಾತನಾಡಿರುವುದನ್ನು ‘ತಡವಾಗಿ ಆದ ಜ್ಞಾನೋದಯ’ ಎಂದು ಪತ್ರಿಕೆ ಜರೆದಿದೆ.
ಪ್ರತಿಯೊಂದು ರಾಜ್ಯದಲ್ಲೂ ವಿರೋಧ ಪಕ್ಷಗಳ ಒಗ್ಗಟ್ಟನ್ನು ಸ್ವತಃ ರಾಹುಲ್ ಗಾಂಧಿ ಅವರೇ ಹಾಳು ಮಾಡಿದ್ದಾರೆ ಎಂದು ಸಂಪಾದಕೀಯದಲ್ಲಿ ನೇರವಾಗಿ ಆರೋಪಿಸಲಾಗಿದೆ. ಕಾಂಗ್ರೆಸ್‌ನ ಇಂತಹ ನಿಲುವಿನಿಂದಾಗಿಯೇ ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು (AAP) ಇಂಡಿಯಾ ಒಕ್ಕೂಟದಿಂದ ಹೊರಬರಬೇಕಾಯಿತು ಎಂದಿದೆ.
ಕೇರಳದಲ್ಲಿ ರಾಹುಲ್ ರಾಜಕೀಯ ಅಪಕ್ವತೆ
ಕೇರಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ತೋರಿದ ನಡವಳಿಕೆಯನ್ನು ಡಿಎಂಕೆ ಕಠಿಣ ಪದಗಳಲ್ಲಿ ಖಂಡಿಸಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಪ್ರಧಾನಿ ಮೋದಿ ನಡುವೆ ರಹಸ್ಯ ಒಪ್ಪಂದವಿದೆ ಎಂದು ಆರೋಪಿಸಿದ್ದ ರಾಹುಲ್ ಹೇಳಿಕೆಯನ್ನು ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಸಭೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದನ್ನು ಮುರಸೋಲಿ ನೆನಪಿಸಿದೆ.
ಎಡಪಕ್ಷಗಳು ಬಿಜೆಪಿಯನ್ನು ವಿರೋಧಿಸಲು ಕಾಂಗ್ರೆಸ್‌ನಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಕಿಡಿಕಾರಿದ್ದು, ರಾಹುಲ್ ಗಾಂಧಿ ಅವರ ಹೇಳಿಕೆಗಳು ಅವರ ‘ರಾಜಕೀಯ ಅಪಕ್ವತೆ ಮತ್ತು ಪ್ರಾಮಾಣಿಕತೆಯ ಕೊರತೆಯನ್ನು’ ಎತ್ತಿ ತೋರಿಸುತ್ತವೆ ಎಂದು ಡಿಎಂಕೆ ಪತ್ರಿಕೆ ಬರೆದಿದೆ. ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರನ್ನು ತಬ್ಬಿಕೊಳ್ಳುವ ರಾಹುಲ್ ಗಾಂಧಿ, ಕೇರಳ ಸಿಎಂ ಅವರನ್ನು ತಬ್ಬಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಇವರ ಇಬ್ಬಗೆ ನೀತಿಯಾಗಿದೆ ಎಂದು ಎಡಪಕ್ಷಗಳ ನಾಯಕರು ಟೀಕಿಸಿದ್ದಾರೆ.
ವಿಷ ಕುಡಿದ ಶಿವನಿಗೆ ರಾಹುಲ್ ಹೋಲಿಕೆ: ಡಿಎಂಕೆ ಪ್ರತ್ಯುತ್ತರ
ಬಿಜೆಪಿಯನ್ನು ವಿರೋಧಿಸಲು ಕರೆದಿದ್ದ ಸಭೆಯಲ್ಲಿ ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ವಿರೋಧಿ ಅಲೆಯೇ ಎದ್ದು ಕಾಣಲು ರಾಹುಲ್ ಗಾಂಧಿ ಅವರೇ ನೇರ ಹೊಣೆ ಎಂದು ಡಿಎಂಕೆ ಹೇಳಿದೆ. ಒಕ್ಕೂಟದ ನಾಯಕರ ಟೀಕೆಗಳನ್ನು ಶಿವನು ವಿಷ ಕುಡಿದಂತೆ ಕಾಂಗ್ರೆಸ್ ನುಂಗುತ್ತದೆ ಎಂಬ ರಾಹುಲ್ ಹೇಳಿಕೆಗೆ ತಿರುಗೇಟು ನೀಡಿರುವ ಪತ್ರಿಕೆಯು, “ಪುರಾಣ ಕಥೆಯಲ್ಲಿ ಶಿವನು ವಿಷವನ್ನು ಸೃಷ್ಟಿಸಲಿಲ್ಲ.
ಇಂಡಿಯಾ ಒಕ್ಕೂಟದಲ್ಲಿ ಅಮೃತದ ಬದಲು ವಿಷವನ್ನು ಕದಡುತ್ತಿರುವವರು ಯಾರು?” ಎಂದು ಪ್ರಶ್ನಿಸಿದೆ. ಕಾಂಗ್ರೆಸ್ ಇತ್ತೀಚೆಗೆ ತಮಿಳುನಾಡಿನಲ್ಲಿ ಆಡಳಿತಾರೂಢ ಟಿವಿಕೆ (TVK) ಪಕ್ಷದೊಂದಿಗೆ ಕೈಜೋಡಿಸಿದ ನಂತರ, ಆ ಪಕ್ಷದ ನಾಯಕನೇ ಇಂಡಿಯಾ ಒಕ್ಕೂಟಕ್ಕೆ ಸೇರಲು ನಿರಾಕರಿಸಿದಾಗ ರಾಹುಲ್ ಗಾಂಧಿ ಮತ್ತೆ ಡಿಎಂಕೆಯ ವಿಶ್ವಾಸಾರ್ಹತೆಯ ಜಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಇಂತಹ ದುರಹಂಕಾರದ ನಡವಳಿಕೆಯನ್ನು ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಹಾಗೂ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ನಾಯಕರು ಖಂಡಿಸಿದ್ದಾರೆ ಎಂದು ಮುರಸೋಲಿ ವರದಿ ಮಾಡಿದೆ.
ಇದನ್ನೂ ಓದಿ : ಇನ್ಮುಂದೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್ ಶಾಪ್‌ನಲ್ಲಿ ಸಿರಪ್ ಸಿಗಲ್ಲ – ಕೇಂದ್ರ ಸರ್ಕಾರ ಹೊಸ ರೂಲ್ಸ್


















