ಬೆಂಗಳೂರು : ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ಇತಿಹಾಸವೊಂದು ಸೃಷ್ಟಿಯಾಗಲು ವೇದಿಕೆ ಸಿದ್ಧಗೊಂಡಿದೆ. ದೆಹಲಿ ಮೂಲದ ಆಲ್‌ರೌಂಡರ್ ನಿಖಿಲ್ ಚೌಧರಿ ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ತಂಡದಲ್ಲಿ 30 ವರ್ಷದ ನಿಖಿಲ್ ಚೌಧರಿಗೆ ಸ್ಥಾನ ಸಿಕ್ಕಿದೆ.
ವೈಯಕ್ತಿಕ ಕಾರಣಗಳಿಗಾಗಿ ರಜೆ ಪಡೆದಿರುವ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್ ಅವರ ಬದಲಿ ಆಟಗಾರನಾಗಿ ನಿಖಿಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಜೂನ್ 17 ರಿಂದ ಚಟ್ಟೋಗ್ರಾಮ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಆಡುವ ಹನ್ನೊಂದರ ಬಳಗದಲ್ಲಿ ನಿಖಿಲ್‌ಗೆ ಅವಕಾಶ ಸಿಕ್ಕರೆ, ಅವರು ಕಳೆದ 60 ವರ್ಷಗಳಲ್ಲೇ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಭಾರತೀಯ ಮೂಲದ ಪುರುಷ ಕ್ರಿಕೆಟಿಗ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಹಿಂದೆ 1964ರಲ್ಲಿ ಭಾರತೀಯ ಮೂಲದ ಆಟಗಾರರೊಬ್ಬರು ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದರು.
ಪಂಜಾಬ್ ದೇಶಿ ಕ್ರಿಕೆಟ್‌ನಿಂದ ಬಿಗ್ ಬ್ಯಾಶ್ ಲೀಗ್ ಸ್ಟಾರ್‌ವರೆಗೆ
ದೆಹಲಿಯಲ್ಲಿ ಹುಟ್ಟಿ ಬೆಳೆದ ನಿಖಿಲ್ ಚೌಧರಿ ಅವರ ಕ್ರಿಕೆಟ್ ಜರ್ನಿ ಭಾರತದಲ್ಲೇ ಆರಂಭವಾಗಿತ್ತು. ಭಾರತದ ದೇಶಿ ಕ್ರಿಕೆಟ್‌ನಲ್ಲಿ ಅವರು ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರು. ಪಂಜಾಬ್ ಪರ 14 ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಿದ್ದ ನಿಖಿಲ್, ಹರಭಜನ್ ಸಿಂಗ್, ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಪ್ರಮುಖ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಹಾಗೂ ಟ್ರಯಲ್ಸ್‌ನಲ್ಲೂ ಭಾಗವಹಿಸಿದ್ದರು.
ಆದರೆ ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಅವರ ಬದುಕು ಸಂಪೂರ್ಣ ತಿರುವು ಪಡೆದುಕೊಂಡಿತು. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ತಮ್ಮ ಚಿಕ್ಕಪ್ಪನ ಮನೆಗೆ ಭೇಟಿ ನೀಡಲು ಹೋಗಿದ್ದ ನಿಖಿಲ್, ಅಂತರರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳಿಂದಾಗಿ ಅಲ್ಲೇ ಉಳಿಯಬೇಕಾಯಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಅವರು ಆಸ್ಟ್ರೇಲಿಯಾದಲ್ಲೇ ವೃತ್ತಿಪರ ಕ್ರಿಕೆಟ್ ಮುಂದುವರಿಸಲು ನಿರ್ಧರಿಸಿದರು. ಕಠಿಣ ಪರಿಶ್ರಮದಿಂದ ಟಾಸ್ಮೇನಿಯಾ ರಾಜ್ಯ ತಂಡ ಮತ್ತು ಬಿಗ್ ಬ್ಯಾಶ್ ಲೀಗ್‌ನಲ್ಲಿ (BBL) ಹೋಬಾರ್ಟ್ ಹರಿಕೇನ್ಸ್ ತಂಡದ ಪ್ರಮುಖ ಆಟಗಾರನಾಗಿ ಬೆಳೆದರು.
ಆಸೀಸ್ ಮೈದಾನದಲ್ಲಿ ವೇಗಿಗಳನ್ನೇ ಚಚ್ಚಿದ ಭಾರತೀಯ ಸ್ಪಿನ್ನರ್
ಸಾಮಾನ್ಯವಾಗಿ ಭಾರತೀಯ ಉಪಖಂಡದಲ್ಲಿ ಬೆಳೆದ ಆಟಗಾರರು ಸ್ಪಿನ್ ಬೌಲಿಂಗ್ ಅನ್ನು ಚೆನ್ನಾಗಿ ಆಡುತ್ತಾರೆ. ಆದರೆ ನಿಖಿಲ್ ಚೌಧರಿ ಆಸ್ಟ್ರೇಲಿಯಾದ ವೇಗದ ಮತ್ತು ಬೌನ್ಸ್ ಪಿಚ್‌ಗಳಲ್ಲಿ ವೇಗಿಗಳ ವಿರುದ್ಧವೇ ಹೆಚ್ಚು ಅಬ್ಬರಿಸಿದ್ದಾರೆ. ಕಳೆದ ಬಿಬಿಎಲ್ ಸೀಸನ್‌ನಲ್ಲಿ ಹೋಬಾರ್ಟ್ ಹರಿಕೇನ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿಖಿಲ್, ವೇಗದ ಬೌಲರ್‌ಗಳ ವಿರುದ್ಧ ಬರೋಬ್ಬರಿ 180 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಕಳೆದ ಸೀಸನ್‌ನಲ್ಲಿ ಅವರು 30.70 ರ ಸರಾಸರಿಯಲ್ಲಿ 153 ರ ಸ್ಟ್ರೈಕ್ ರೇಟ್‌ನೊಂದಿಗೆ 307 ರನ್ ಗಳಿಸಿ ಮಿಂಚಿದ್ದರು. ಕೇವಲ ಟಿ20 ಮಾತ್ರವಲ್ಲದೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ (ಶೆಫೀಲ್ಡ್ ಶೀಲ್ಡ್) ನ್ಯೂ ಸೌತ್ ವೇಲ್ಸ್ ವಿರುದ್ಧ ಭರ್ಜರಿ ಶತಕ ಹಾಗೂ ಕ್ವೀನ್ಸ್‌ಲ್ಯಾಂಡ್ ವಿರುದ್ಧ 5 ವಿಕೆಟ್ ಕಬಳಿಸಿ ತಾವೊಬ್ಬ ಅತ್ಯುತ್ತಮ ಆಲ್‌ರೌಂಡರ್ ಎಂಬುದನ್ನು ಸಾಬೀತುಪಡಿಸಿದ್ದರು. ಪ್ರಸ್ತುತ ಐಪಿಎಲ್ 2026ರ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.
ಪೌರತ್ವ ಇಲ್ಲದಿದ್ದರೂ ಐಸಿಸಿ ನಿಯಮದಡಿ ಆಸೀಸ್ ಕ್ಯಾಪ್‌ಗೆ ರೆಡಿ
ಗಮನಾರ್ಹ ವಿಷಯವೆಂದರೆ ನಿಖಿಲ್ ಚೌಧರಿ ಅವರು ಇನ್ನೂ ಆಸ್ಟ್ರೇಲಿಯಾದ ಪೌರತ್ವವನ್ನು (Citizenship) ಪಡೆದಿಲ್ಲ. ಆದರೆ ಅವರು ಅಲ್ಲಿನ ಕಾಯಂ ನಿವಾಸಿ (Permanent Residency) ಆಗಿರುವುದರಿಂದ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನಿಯಮಾವಳಿಗಳ ಪ್ರಕಾರ ಆಸ್ಟ್ರೇಲಿಯಾ ದೇಶವನ್ನು ಪ್ರತಿನಿಧಿಸಲು ಸಂಪೂರ್ಣ ಅರ್ಹತೆ ಹೊಂದಿದ್ದಾರೆ. ಆಸ್ಟ್ರೇಲಿಯಾದ ಮುಖ್ಯ ಆಯ್ಕೆಗಾರ ಟೋನಿ ಡೋಡೆಮೈಡ್ ಈ ಬಗ್ಗೆ ಮಾತನಾಡಿ, “ನಿಖಿಲ್ ಕಳೆದ ಕೆಲವು ಸಮಯದಿಂದ ನಮ್ಮ ನಿರಂತರ ಗಮನದಲ್ಲಿದ್ದರು. ಬ್ರಿಸ್ಬೇನ್‌ನಲ್ಲಿ ನಡೆದ ಪ್ರೀ-ಸೀಸನ್ ಕ್ಯಾಂಪ್‌ಗಳಲ್ಲೂ ಅವರು ಭಾಗವಹಿಸಿದ್ದರು. ಕಳೆದ ಬಿಬಿಎಲ್ ಸೀಸನ್‌ನಲ್ಲಿ ಅವರ ಪ್ರದರ್ಶನ ನಮಗೆ ತುಂಬಾ ಇಷ್ಟವಾಗಿತ್ತು. ಬಾಂಗ್ಲಾದೇಶ ಪ್ರವಾಸದಲ್ಲಿ ಅವರಿಗೆ ಉತ್ತಮ ಅನುಭವ ಸಿಗಲಿದ್ದು, ಮೊದಲ ಪಂದ್ಯದ ಆಡುವ ಬಳಗವನ್ನು ಆಯ್ಕೆ ಮಾಡುವಾಗ ಅವರ ಹೆಸರನ್ನು ಖಂಡಿತ ಪರಿಗಣಿಸುತ್ತೇವೆ” ಎಂದು ತಿಳಿಸಿದ್ದಾರೆ
ಇದನ್ನೂ ಓದಿ : ಇಂಟರ್ನೆಟ್ ಬೇಡ, ಕರೆ ಮಾಡುವ ಸೌಲಭ್ಯ ಸಾಕು ಎನ್ನುವವರಿಗೆ ಜಿಯೋ ಗುಡ್ ನ್ಯೂಸ್ : ಇಲ್ಲಿದೆ ಹೊಸ ಪ್ಲಾನ್


















