ನವದೆಹಲಿ : ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ದೇಶದ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸಹಜ ಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕೈಗಾರಿಕಾ, ವಾಣಿಜ್ಯ ಮತ್ತು ಸಾಂಸ್ಥಿಕ ಬಳಕೆದಾರರು ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದ ಸಾರಾಸಗಟಾಗಿ ಅಂದರೆ ಬೃಹತ್ ಪ್ರಮಾಣದಲ್ಲಿ(Bulk) ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುವುದನ್ನು ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಿದೆ. ಇಂತಹ ದೊಡ್ಡ ಮಟ್ಟದ ಗ್ರಾಹಕರು ಇನ್ನು ಮುಂದೆ ತಮ್ಮ ಇಂಧನ ಅಗತ್ಯಗಳನ್ನು ಬಂಕ್‌ಗಳ ಬದಲಾಗಿ ನಿಗದಿಪಡಿಸಿದ ‘ಬಲ್ಕ್ ಸೇಲ್ ಪಾಯಿಂಟ್ಸ್’ (ಬೃಹತ್ ಮಾರಾಟ ಕೇಂದ್ರಗಳು) ಮೂಲಕವೇ ಪಡೆದುಕೊಳ್ಳಬೇಕು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕೃತ ಆದೇಶ ತಿಳಿಸಿದೆ.
ಬೆಲೆ ವ್ಯತ್ಯಾಸವೇ ನಿಯಮ ಜಾರಿಗೆ ಕಾರಣ
ಇತ್ತೀಚಿನ ದಿನಗಳಲ್ಲಿ ಜಾಗತಿಕ ರಾಜಕೀಯ ವಿದ್ಯಮಾನಗಳು ಹಾಗೂ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಸರಬರಾಜು ಜಾಲಕ್ಕೆ ಧಕ್ಕೆಯಾಗಿದೆ. ಇದರ ನಡುವೆಯೂ ಸಾಮಾನ್ಯ ಗ್ರಾಹಕರಿಗೆ ಹೊರೆಯಾಗದಂತೆ ತಡೆಯಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಇಂಧನ ಬೆಲೆಯನ್ನು ನಿಯಂತ್ರಣದಲ್ಲಿಟ್ಟಿವೆ. ಸದ್ಯ ದೆಹಲಿಯಲ್ಲಿ ಸಾಮಾನ್ಯ ಗ್ರಾಹಕರಿಗೆ ಲೀಟರ್ ಡೀಸೆಲ್ ಬೆಲೆ 95.20 ರೂ. ಇದ್ದರೆ, ಕೈಗಾರಿಕೆಗಳಿಗೆ ಮಾರಾಟ ಮಾಡುವ ಬಲ್ಕ್ ಬೆಲೆ ಲೀಟರ್‌ಗೆ ಬರೋಬ್ಬರಿ 134.50 ರೂ. ಇದೆ. ಈ ಭಾರಿ ಬೆಲೆ ವ್ಯತ್ಯಾಸದ ಲಾಭ ಪಡೆಯಲು ಟೆಲಿಕಾಂ ಟವರ್‌ಗಳು ಮತ್ತು ಜನರೇಟರ್ ಬಳಸುವ ದೊಡ್ಡ ಕೈಗಾರಿಕೆಗಳು ಸಾಮಾನ್ಯ ಪೆಟ್ರೋಲ್ ಬಂಕ್‌ಗಳ ಮೊರೆ ಹೋಗಿದ್ದವು. ಇದರಿಂದಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಡೀಸೆಲ್‌ಗೆ ಅಸಹಜ ಬೇಡಿಕೆ ಸೃಷ್ಟಿಯಾಗಿತ್ತು.
ಸಾಮಾನ್ಯ ಗ್ರಾಹಕರಿಗೆ ತಟ್ಟದಂತೆ ಮುನ್ನೆಚ್ಚರಿಕೆ
ದೊಡ್ಡ ಸಂಸ್ಥೆಗಳು ಪೆಟ್ರೋಲ್ ಬಂಕ್‌ಗಳಿಂದಲೇ ಇಂಧನ ಲೂಟಿ ಮಾಡುವುದರಿಂದ ಸಾಮಾನ್ಯ ನಾಗರಿಕರಿಗೆ ಇಂಧನದ ಕೊರತೆಯಾಗುವ ಸಾಧ್ಯತೆ ಇತ್ತು. ಸ್ಥಳೀಯವಾಗಿ ಸಾರಿಗೆ ಮತ್ತು ಅಗತ್ಯ ಸೇವೆಗಳಿಗೆ ಧಕ್ಕೆಯಾಗುವುದನ್ನು ತಡೆಯಲು ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ. ಹೊಸ ನಿಯಮದ ಪ್ರಕಾರ, ಪೆಟ್ರೋಲ್ ಬಂಕ್‌ಗಳಲ್ಲಿ ಇನ್ನು ಮುಂದೆ ಕೇವಲ ವಾಹನಗಳ ಇಂಧನ ಟ್ಯಾಂಕ್‌ಗಳಿಗೆ ಅಥವಾ ‘ಪೆಸೊ’ (PESO) ಅನುಮೋದಿತ ಕ್ಯಾನ್‌ಗಳಿಗೆ ಮಾತ್ರ ಡೀಸೆಲ್ ತುಂಬಿಸಿಕೊಡಬೇಕಾಗುತ್ತದೆ. ಅಷ್ಟೇ ಅಲ್ಲದೆ, ಒಬ್ಬ ಗ್ರಾಹಕನಿಗೆ ಅಥವಾ ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀ. ಡೀಸೆಲ್ ಮಾತ್ರ ಖರೀದಿಸಲು ಅವಕಾಶವಿದ್ದು, ಹೀಗೆ ಖರೀದಿಸಿದ ಇಂಧನವನ್ನು ಮರುಮಾರಾಟ ಮಾಡುವಂತಿಲ್ಲ ಎಂದು ಕಡ್ಡಾಯಗೊಳಿಸಲಾಗಿದೆ.
90 ದಿನಗಳ ಕಾಲ ಕಠಿಣ ನಿಯಮ ಜಾರಿ
ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಮಾನವಾಗಿ ವಿತರಣೆಯಾಗುವಂತೆ ನೋಡಿಕೊಳ್ಳಲು ಮತ್ತು ಕಾಳಸಂತೆಯನ್ನು ತಡೆಯಲು ಜೂ.11 ರಂದು ‘ಮೋಟರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ ನಿಯಂತ್ರಣ ಆದೇಶ 2026’ ಅನ್ನು ಹೊರಡಿಸಲಾಗಿದೆ. ಈ ನಿಯಮಗಳು ಪ್ರಾಥಮಿಕವಾಗಿ 90 ದಿನಗಳವರೆಗೆ ಜಾರಿಯಲ್ಲಿರಲಿವೆ. ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಇದನ್ನು ಮತ್ತಷ್ಟು ವಿಸ್ತರಿಸುವ ಅಧಿಕಾರ ಹೊಂದಿದೆ. ಆದರೆ, ವಿಶೇಷ ಸಂದರ್ಭಗಳಲ್ಲಿ ಕೆಲವು ನಿರ್ದಿಷ್ಟ ಗ್ರಾಹಕರು ಅಥವಾ ವಲಯಗಳಿಗೆ ಇದರಿಂದ ವಿನಾಯಿತಿ ನೀಡುವ ಹಕ್ಕನ್ನು ಸರ್ಕಾರ ಕಾಯ್ದಿರಿಸಿದೆ.
ಅಕ್ರಮ ಎಸಗಿದರೆ ಕಠಿಣ ಕಾನೂನು ಕ್ರಮ
ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಸೂಚಿಸಲಾಗಿದೆ. ಇದರೊಂದಿಗೆ ಇಂಧನ ದಾಸ್ತಾನು ಮಾಡುವುದು, ಕಾಳಸಂತೆ ಮಾರಾಟ ಅಥವಾ ನಿಯಮ ಬಾಹಿರವಾಗಿ ಇಂಧನ ಸಾಗಣೆ ಮಾಡುವುದರ ವಿರುದ್ಧ ಕಠಿಣ ನಿಗಾ ವಹಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ‘ಅಗತ್ಯ ವಸ್ತುಗಳ ಕಾಯ್ದೆ’ಯಡಿ (Essential Commodities Act) ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಸರ್ಕಾರ ಎಚ್ಚರಿಸಿದೆ.
ಇದನ್ನೂ ಓದಿ ; ಇಂದಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ – 12 ತಂಡಗಳ ಕದನಕ್ಕೆ ವೇದಿಕೆ ಸಿದ್ದ!



















