ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರಿಗೆ ಸಾರ್ವಜನಿಕರ ಆಕ್ರೋಶದ ಬಿಸಿ ತಟ್ಟಲಾರಂಭಿಸಿದೆ. ಶನಿವಾರ ರಾತ್ರಿ ಕಮರಹಟಿ ವಿಧಾನಸಭಾ ಕ್ಷೇತ್ರದ ಅರಿಯಾದಹ ಪ್ರದೇಶದಲ್ಲಿ ಹಿರಿಯ ಟಿಎಂಸಿ ಶಾಸಕ ಮದನ್ ಮಿತ್ರಾ ಅವರ ಬೆಂಗಾವಲು ವಾಹನದ ಮೇಲೆ ಸ್ಥಳೀಯ ನಿವಾಸಿಗಳು ಮೊಟ್ಟೆ ಎಸೆಯುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಟಿಎಂಸಿ ನಾಯಕರ ವಿರುದ್ಧ ಸರಣಿ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಹೊಸ ಘಟನೆಯು ಪಕ್ಷಕ್ಕೆ ಮತ್ತಷ್ಟು ಮುಜುಗರ ತಂದಿಟ್ಟಿದೆ.
ಸ್ಥಳೀಯವಾಗಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶಾಸಕ ಮದನ್ ಮಿತ್ರಾ ಅವರು ಅರಿಯಾದಹ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ. ಕಮರಹಟಿಯ 14ನೇ ವಾರ್ಡ್‌ನ ಕೌನ್ಸಿಲರ್ ನಿವಾಸದ ಹೊರಗೆ ಜಮಾಯಿಸಿದ್ದ ನೂರಾರು ಆಟೋ ರಿಕ್ಷಾ ಮತ್ತು ಇ-ರಿಕ್ಷಾ ಚಾಲಕರು ಟಿಎಂಸಿ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.
ಕಳೆದ ಹಲವು ವರ್ಷಗಳಿಂದ ಸ್ಥಳೀಯ ಟಿಎಂಸಿ ನಾಯಕರು ತಮ್ಮಿಂದ ಅಕ್ರಮವಾಗಿ ವಸೂಲಿ ಮಾಡಿರುವ ಲಂಚದ ಹಣವನ್ನು ತಕ್ಷಣವೇ ವಾಪಸ್ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಇದೇ ವೇಳೆ ಉದ್ರಿಕ್ತ ಗುಂಪು ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆಗಳನ್ನು ಎಸೆದಿದ್ದು, ಪರಿಸ್ಥಿತಿ ಕೈಮೀರುತ್ತಿದ್ದಂತೆ ಶಾಸಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ದಾಳಿಯ ವೇಳೆ ತಾನು ಕಾರಿನ ಒಳಗಿರಲಿಲ್ಲ ಎಂದು ಮಿತ್ರಾ ಸ್ಪಷ್ಟಪಡಿಸಿದ್ದಾರೆ. ಆದರೂ, ಈ ಗದ್ದಲದಲ್ಲಿ ಅವರ ಚಾಲಕನ ಮೇಲೆ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ.
ದಾಳಿಯ ಹಿಂದೆ ಬಿಜೆಪಿ ಪ್ಲಾನ್ ಎಂದ ಶಾಸಕ
ಈ ಪ್ರತಿಭಟನೆಯ ಹಿಂದೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳ ಕೈವಾಡವಿದೆ ಎಂದು ಶಾಸಕ ಮದನ್ ಮಿತ್ರಾ ಗಂಭೀರ ಆರೋಪ ಮಾಡಿದ್ದಾರೆ. ಇದು ಪೂರ್ವಯೋಜಿತ ದಾಳಿ ಎಂದು ಅವರು ದೂರಿದ್ದಾರೆ. ಆದರೆ, ಸ್ಥಳೀಯ ನಿವಾಸಿಗಳ ಪ್ರಕಾರ, ಟಿಎಂಸಿ ನಾಯಕರ ಭ್ರಷ್ಟಾಚಾರ ಮತ್ತು ಸುಲಿಗೆಯ ವಿರುದ್ಧ ಈ ಭಾಗದಲ್ಲಿ ದೀರ್ಘಕಾಲದಿಂದಲೂ ಸಾರ್ವಜನಿಕರಲ್ಲಿ ಅಸಮಾಧಾನ ಕುದಿಯುತ್ತಿತ್ತು. ರಾಜ್ಯದಲ್ಲಿ ರಾಜಕೀಯ ಅಧಿಕಾರ ಬದಲಾಗುತ್ತಿದ್ದಂತೆ, ಈ ನಾಯಕರನ್ನು ಹೊಣೆಗಾರರನ್ನಾಗಿ ಮಾಡಲು ಜನ ಬೀದಿಗೆ ಇಳಿದಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಟಿಎಂಸಿ ವಿರುದ್ಧ ಪ್ರತಿಭಟನೆಯ ಸಂಕೇತವಾದ ‘ಮೊಟ್ಟೆ’!
ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಟಿಎಂಸಿ ನಾಯಕರ ವಿರುದ್ಧ ಸಾರ್ವಜನಿಕರು ಮೊಟ್ಟೆ ಎಸೆಯುವುದು ಒಂದು ದೊಡ್ಡ ಪ್ರತಿಭಟನೆಯ ಸಂಕೇತವಾಗಿ ಮಾರ್ಪಟ್ಟಿದೆ. ಕಳೆದ ವಾರವಷ್ಟೇ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್‌ಪುರಕ್ಕೆ ಭೇಟಿ ನೀಡಿದ್ದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಮೇಲೂ ಕಲ್ಲು, ಮೊಟ್ಟೆಗಳನ್ನು ಎಸೆಯಲಾಗಿತ್ತು. ತೀವ್ರ ಆಕ್ರೋಶದ ನಡುವೆ ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕಾಯಿತು. ಸುಲಿಗೆ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿತರಾಗಿರುವ ಟಿಎಂಸಿ ನಾಯಕರಾದ ಜಯಪ್ರಕಾಶ್ ಮಜುಂದಾರ್ ಮತ್ತು ಮಾಜಿ ಸಚಿವ ಸ್ವರೂಪ್ ಬಿಸ್ವಾಸ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗಲೂ ಸಾರ್ವಜನಿಕರು ಮೊಟ್ಟೆಗಳನ್ನು ಹಿಡಿದು ಪ್ರತಿಭಟಿಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಬಂಗಾಳದಾದ್ಯಂತ ಟಿಎಂಸಿ ನಾಯಕರು ತೀವ್ರ ಸಾರ್ವಜನಿಕ ಆಕ್ರೋಶ ಎದುರಿಸುತ್ತಿದ್ದಾರೆ.
ಇದನ್ನೂ ಓದಿ : “ದೇಶದ ಯುವಕರು ಯಾರ ಕೈಗೊಂಬೆಯೂ ಅಲ್ಲ” : ‘ಕಾಕ್ರೋಚ್ ಪಾರ್ಟಿ’ ವಿರುದ್ಧ ನಿತಿನ್ ನಬಿನ್ ವಾಗ್ದಾಳಿ



















