ಬೆಂಗಳೂರು : ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳ ಮೂಲಕವೇ ಪ್ರಸಿದ್ಧಿ ಪಡೆದಿರುವ ವಿವೋ (Vivo) ಸಂಸ್ಥೆ, ಇದೀಗ ತನ್ನ ಮುಂಬರುವ ಫ್ಲ್ಯಾಗ್‌ಶಿಪ್ (Flagship) ಮಾದರಿಯಾದ ‘ವಿವೋ ಎಕ್ಸ್500’ (Vivo X500) ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಈ ಸರಣಿಯ ಟಾಪ್-ಎಂಡ್ ಮಾಡೆಲ್ ಆಗಿರುವ ‘ವಿವೋ ಎಕ್ಸ್500 ಪ್ರೊ ಮ್ಯಾಕ್ಸ್’ (Vivo X500 Pro Max) ಸ್ಮಾರ್ಟ್‌ಫೋನ್‌ನ ಪ್ರಮುಖ ವೈಶಿಷ್ಟ್ಯಗಳು ಚೀನಾದ ಮೈಕ್ರೋಬ್ಲಾಗಿಂಗ್ ತಾಣವಾದ ವೀಬೋದಲ್ಲಿ (Weibo) ಸೋರಿಕೆಯಾಗಿವೆ.
ಈ ಹೊಸ ಸ್ಮಾರ್ಟ್‌ಫೋನ್ ಬೃಹತ್ ಬ್ಯಾಟರಿ ಹಾಗೂ ಅತ್ಯಾಧುನಿಕ ಡಿಸ್ಪ್ಲೇಯೊಂದಿಗೆ ಟೆಕ್ ಪ್ರಿಯರಲ್ಲಿ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಮುಂಬರುವ ಸೆಪ್ಟೆಂಬರ್ ತಿಂಗಳ ವೇಳೆಗೆ ಬಿಡುಗಡೆಯಾಗಲಿರುವ ಈ ಫೋನ್‌ನ ನಿರೀಕ್ಷಿತ ವಿಶೇಷತೆಗಳ ಸಂಪೂರ್ಣ ವಿವರ ಇಲ್ಲಿದೆ.
ಬೃಹತ್ ಬ್ಯಾಟರಿ ಮತ್ತು ಶಕ್ತಿಶಾಲಿ ಪ್ರೊಸೆಸರ್
ಸೋರಿಕೆಯಾದ ವರದಿಗಳ ಪ್ರಕಾರ, ವಿವೋ ಸಂಸ್ಥೆಯು ತನ್ನ ಮುಂಬರುವ ‘ವಿವೋ ಎಕ್ಸ್500 ಪ್ರೊ ಮ್ಯಾಕ್ಸ್’ ಸ್ಮಾರ್ಟ್‌ಫೋನ್‌ನಲ್ಲಿ ದಾಖಲೆಯ 8,000 ಎಂಎಎಚ್ (8,000mAh) ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಅಳವಡಿಸಲು ಆಂತರಿಕ ಪರೀಕ್ಷೆ ನಡೆಸುತ್ತಿದೆ ಎನ್ನಲಾಗಿದೆ. ಇದು ನಿಜವಾದಲ್ಲಿ, ವಿವೋ ಎಕ್ಸ್ ಸರಣಿಯ ಇತಿಹಾಸದಲ್ಲಿಯೇ ಅತಿ ದೊಡ್ಡ ಬ್ಯಾಟರಿ ಹೊಂದಿದ ಫೋನ್ ಎಂಬ ಹೆಗ್ಗಳಿಕೆಗೆ ಈ ಮಾಡೆಲ್ ಪಾತ್ರವಾಗಲಿದೆ. ಇದರೊಂದಿಗೆ ಅತ್ಯಾಧುನಿಕ ಕಾರ್ಯಕ್ಷಮತೆಗಾಗಿ, 2 ನ್ಯಾನೊಮೀಟರ್ (2nm) ತಂತ್ರಜ್ಞಾನ ಆಧಾರಿತ ಮೀಡಿಯಾ ಟೆಕ್ ಡೈಮೆನ್ಸಿಟಿ 9600 ಪ್ರೊ (MediaTek Dimensity 9600 Pro) ಪ್ರೊಸೆಸರ್ ಅನ್ನು ಈ ಫೋನ್‌ನಲ್ಲಿ ಅಳವಡಿಸುವ ನಿರೀಕ್ಷೆಯಿದೆ. ಈ ಮೂಲಕ ಗೇಮಿಂಗ್ ಹಾಗೂ ಮಲ್ಟಿ-ಟಾಸ್ಕಿಂಗ್‌ಗೆ ಇದು ಹೇಳಿಮಾಡಿಸಿದಂತಿರಲಿದೆ.
ಅತ್ಯಾಧುನಿಕ ಡಿಸ್ಪ್ಲೇ ಮತ್ತು ವಿನ್ಯಾಸ
ಡಿಸ್ಪ್ಲೇ ವಿಚಾರಕ್ಕೆ ಬಂದರೆ, ಈ ಸ್ಮಾರ್ಟ್‌ಫೋನ್ 6.85-ಇಂಚಿನ ಅಥವಾ 6.9-ಇಂಚಿನ ವಿಶಾಲವಾದ 2K ಎಲ್‌ಟಿಪಿಒ (LTPO) ಅಮೋಲೆಡ್ (AMOLED) ಫ್ಲಾಟ್-ಪ್ಯಾನಲ್ ಡಿಸ್ಪ್ಲೇ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದು 144Hz ವರೆಗಿನ ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, ವಿಡಿಯೋ ವೀಕ್ಷಣೆ ಹಾಗೂ ಆಕರ್ಷಕ ಗ್ರಾಫಿಕ್ಸ್ ಅನುಭವವನ್ನು ಮತ್ತಷ್ಟು ಸುಗಮಗೊಳಿಸಲಿದೆ. ಇದರ ಜೊತೆಗೆ, ಬಯೋಮೆಟ್ರಿಕ್ ಭದ್ರತೆಗಾಗಿ ಡಿಸ್ಪ್ಲೇಯ ಒಳಗೇ ಸುಧಾರಿತ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ (Ultrasonic Fingerprint Sensor) ಅಳವಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕ್ಯಾಮೆರಾ ವಿಭಾಗದಲ್ಲಿ ಹೊಸ ಕ್ರಾಂತಿ
ವಿವೋ ಫೋನ್‌ಗಳು ಯಾವಾಗಲೂ ವೃತ್ತಿಪರ ಛಾಯಾಗ್ರಹಣಕ್ಕೆ ಹೆಸರುವಾಸಿ. ಅದರಂತೆಯೇ ಈ ಮಾಡೆಲ್‌ನಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ನೀಡಲಾಗುತ್ತಿದ್ದು, ಇದು ಲೊಫಿಕ್ (LOFIC – Lateral Overflow Integration Capacitor) ತಂತ್ರಜ್ಞಾನವನ್ನು ಹೊಂದಿರಲಿದೆ. ಅತಿಯಾದ ಬೆಳಕಿರುವ ಸನ್ನಿವೇಶಗಳಲ್ಲಿ ಹೆಚ್ಚುವರಿ ಎಲೆಕ್ಟ್ರಾನ್‌ಗಳನ್ನು ನಿರ್ವಹಿಸುವ ಮೂಲಕ ಓವರ್‌ಎಕ್ಸ್‌ಪೋಸರ್ (Overexposure) ಆಗುವುದನ್ನು ಈ ತಂತ್ರಜ್ಞಾನ ತಡೆಯುತ್ತದೆ. ಇದರೊಂದಿಗೆ, ಲಾಂಗ್-ರೇಂಜ್ ಜೂಮ್‌ಗಾಗಿ 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹಾಗೂ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾಗಳನ್ನು ಸಹ ಈ ಫೋನ್ ಹೊಂದಿರಲಿದೆ ಎಂದು ಲೀಕ್ ಆದ ಮಾಹಿತಿಗಳು ಸೂಚಿಸಿವೆ. ಒಟ್ಟಾರೆಯಾಗಿ, ಈ ವರ್ಷದ ಅಂತ್ಯದ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿರುವ ಈ ಸ್ಮಾರ್ಟ್‌ಫೋನ್, ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.
ಇದನ್ನೂ ಓದಿ : ಟಾಟಾ ಅವಿನ್ಯಾ EVಗೆ ಮೇಜರ್ ಅಪ್‌ಡೇಟ್ : ಪ್ಲಾಟ್‌ಫಾರ್ಮ್ ಬದಲಾವಣೆಗೆ ಸಜ್ಜು!



















