ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರ ಸಂಬಳ, ಪಿಂಚಣಿ, ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 8ನೇ ವೇತನ ಆಯೋಗ ರಚಿಸಿದೆ. ಈಗಾಗಲೇ ವೇತನ ಆಯೋಗವು ನೌಕರರ ಒಕ್ಕೂಟಗಳೊಂದಿಗೆ ಸಾಲು ಸಾಲು ಸಭೆಗಳನ್ನು ನಡೆಸುತ್ತಿದೆ. ಇದರ ಬೆನ್ನಲ್ಲೇ, 8ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರಿ ನೌಕರರಿಗೆ ಶೇ.400ರಷ್ಟು ಸಂಬಳ ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ. 5 ಫಿಟ್ ಮೆಂಟ್ ಫ್ಯಾಕ್ಟರ್ ಅನ್ವಯ ಸಂಬಳದಲ್ಲಿ ಭಾರಿ ಏರಿಕೆಯಾಗಲಿದೆ ಎಂದು ವರದಿಯಾಗಿದೆ.
ಈ ಹಿಂದೆ ಎಲ್ಲ ನೌಕರರಿಗೂ ಒಂದೇ ರೀತಿಯ ಫಿಟ್ ಮೆಂಟ್ ಫ್ಯಾಕ್ಟರ್ ಬಳಸಲಾಗುತ್ತಿತ್ತು. ಉದಾಹರಣೆಗೆ 7ನೇ ವೇತನ ಆಯೋಗದಲ್ಲಿ 2.57x ಫಿಟ್ ಮೆಂಟ್ ಇತ್ತು. ಆದರೆ ಪ್ರಸ್ತುತ ಚರ್ಚೆಯಲ್ಲಿರುವ ಪ್ರಸ್ತಾಪದ ಪ್ರಕಾರ, ಇಂಡಿಯನ್ ರೈಲ್ವೆ ಟೆಕ್ನಿಕಲ್ ಸೂಪರ್ ವೈಸರ್ಸ್ ಅಸೋಸಿಯೇಷನ್ (IRTSA) ಸಂಸ್ಥೆಯು ನೌಕರರ ವಿಭಿನ್ನ ವೇತನ ಶ್ರೇಣಿಗಳಿಗೆ (Pay Levels) 5 ಬೇರೆ ಬೇರೆ ಫಿಟ್ ಮೆಂಟ್ ಫ್ಯಾಕ್ಟರ್ ಗಳನ್ನು ಅಳವಡಿಸಬೇಕು ಎಂಬ ಪ್ರಸ್ತಾಪ ಇರಿಸಿದೆ.
ಇದರಿಂದಾಗಿ ಕೆಲವು ಉನ್ನತ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ಮೂಲ ವೇತನದಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ. ತಜ್ಞರು ಮತ್ತು ಮೂಲಗಳ ಪ್ರಕಾರ, 8ನೇ ವೇತನ ಆಯೋಗ ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಬಳ/ಪಿಂಚಣಿಯಲ್ಲಿ ಶೇ. 30 ರಿಂದ ಶೇ. 34 ರಷ್ಟು ಹೆಚ್ಚಳವನ್ನು ನಿರೀಕ್ಷಿಸಬಹುದು. ಅದೇ ರೀತಿ, 5 ಫಿಟ್ ಮೆಂಟ್ ಪ್ಯಾಕ್ಟರ್ ಗಳನ್ನು ಅಳವಡಿಸಿಕೊಂಡರೆ, ಶೇ.400ರಷ್ಟು ಜಾಸ್ತಿಯಾಗುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಕೇವಲ ವೇತನ ಪರಿಷ್ಕರಣೆಯಷ್ಟೇ ಅಲ್ಲದೆ, ಹಳೆಯ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಯನ್ನು ಆಯೋಗದ ಮುಂದೆ ಇಟ್ಟಿವೆ. ಹೊಸ ವೇತನ ಆಯೋಗದ ಜಾರಿಯಿಂದಾಗಿ ಸುಮಾರು 49 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ನೇರವಾಗಿ ಅನುಕೂಲವಾಗಲಿದೆ.
ಇದನ್ನೂ ಓದಿ : ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ನೇಮಕಾತಿ : ಬಿ.ಇ, ಬಿ.ಟೆಕ್ ಮುಗಿಸಿದವರಿಗೆ ಶುಭ ಸುದ್ದಿ!



















