ಬೆಂಗಳೂರು : ದೇಶದ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಟೊಯೊಟಾ ಕಂಪನಿಯ ಬಹುನಿರೀಕ್ಷಿತ ‘ಅರ್ಬನ್ ಕ್ರೂಸರ್ ಇ-ಬೆಲ್ಲಾ’ ಎಲೆಕ್ಟ್ರಿಕ್ ಎಸ್‌ಯುವಿಯ ‘ಬ್ಯಾಟರಿ ಆಸ್ ಎ ಸರ್ವಿಸ್’ (BaaS) ಬೆಲೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಈ ನೂತನ ಎಲೆಕ್ಟ್ರಿಕ್ ಕಾರಿನ ಟಾಪ್ ಎಂಡ್ ಮಾದರಿಯಾದ ಇ3 (E3) ಆವೃತ್ತಿಯ ಎಕ್ಸ್-ಶೋರೂಂ ಬೆಲೆಯನ್ನು 23.60 ಲಕ್ಷ ರೂಪಾಯಿ ಎಂದು ನಿಗದಿಪಡಿಸಲಾಗಿತ್ತು.
ಆದರೆ, ಈ ಬೆಲೆಯು ಮಾರುತಿ ಸುಜುಕಿ ಸಂಸ್ಥೆಯ ಇ-ವಿಟಾರಾ ಕಾರಿಗಿಂತ ಗಮನಾರ್ಹವಾಗಿ ದುಬಾರಿ ಎಂಬ ಮಾತುಗಳು ವಾಹನ ಮಾರುಕಟ್ಟೆಯಲ್ಲಿ ಕೇಳಿಬಂದಿದ್ದವು. ಇದೀಗ ಗ್ರಾಹಕರಿಗೆ ಆರಂಭಿಕ ಖರೀದಿಯ ಹೊರೆಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಟೊಯೊಟಾ ಸಂಸ್ಥೆಯು ಬ್ಯಾಟರಿ ಬಾಡಿಗೆ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಪ್ರಿಯರಿಗೆ ಹೊಸ ಲೆಕ್ಕಾಚಾರದ ಆಯ್ಕೆಯನ್ನು ಮುಂದಿಟ್ಟಿದೆ.
ಟೊಯೊಟಾ ಬಿಡುಗಡೆ ಮಾಡಿರುವ ಹೊಸ ಬ್ಯಾಟರಿ ಆಸ್ ಎ ಸರ್ವಿಸ್ ಯೋಜನೆಯಡಿ, ಗ್ರಾಹಕರು ಟಾಪ್ ಎಂಡ್ ಇ3 ಆವೃತ್ತಿಯನ್ನು 15.25 ಲಕ್ಷ ರೂಪಾಯಿಗಳ ಮುಂಗಡ ಮೊತ್ತ ಪಾವತಿಸಿ ಖರೀದಿಸಬಹುದಾಗಿದೆ. ಇಲ್ಲಿ ಬ್ಯಾಟರಿಯನ್ನು ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದ್ದು, ಗ್ರಾಹಕರು ತಾವು ವಾಹನ ಚಲಾಯಿಸುವ ಪ್ರತಿ ಕಿಲೋಮೀಟರ್‌ಗೆ 4.99 ರೂಪಾಯಿ ಬ್ಯಾಟರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಟೊಯೊಟಾದ ಈ ಇ-ಬೆಲ್ಲಾ ಕಾರು ಮೂಲತಃ ಮಾರುತಿ ಸುಜುಕಿಯ ಇ-ವಿಟಾರಾ ಕಾರಿನ ಮರು-ನಾಮಕರಣಗೊಂಡ (ರಿಬ್ಯಾಡ್ಜ್) ಆವೃತ್ತಿಯಾಗಿದೆ. ಆದರೆ ಬ್ಯಾಟರಿ ಬಾಡಿಗೆ ಯೋಜನೆಯಲ್ಲೂ ಇ-ವಿಟಾರಾ ಕಾರಿಗೆ ಹೋಲಿಸಿದರೆ ಇ-ಬೆಲ್ಲಾ ದುಬಾರಿಯಾಗಿಯೇ ಉಳಿದಿದೆ. ಮಾರುತಿ ಇ-ವಿಟಾರಾದ ಟಾಪ್ ಎಂಡ್ ಮಾದರಿಯು 61.1 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಕೇವಲ 14.29 ಲಕ್ಷ ರೂಪಾಯಿ ಮುಂಗಡ ಬೆಲೆಗೆ ಲಭ್ಯವಿದ್ದು, ಪ್ರತಿ ಕಿಲೋಮೀಟರ್‌ಗೆ 4.39 ರೂಪಾಯಿ ಬ್ಯಾಟರಿ ಶುಲ್ಕ ಹೊಂದಿದೆ. ಅಂದರೆ, ಟೊಯೊಟಾದ ಇ-ಬೆಲ್ಲಾ ಕಾರು ಆರಂಭಿಕ ಮೊತ್ತದಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಹಾಗೂ ಪ್ರತಿ ಕಿಲೋಮೀಟರ್ ಬ್ಯಾಟರಿ ಬಾಡಿಗೆಯಲ್ಲಿ ಕನಿಷ್ಠ 60 ಪೈಸೆಗಳಷ್ಟು ದುಬಾರಿಯಾಗಿದೆ. ಸದ್ಯಕ್ಕೆ ಟಾಪ್ ಎಂಡ್ ಮಾದರಿಯ ದರ ಮಾತ್ರ ಲಭ್ಯವಿದ್ದು, ಕೆಳಹಂತದ ಆವೃತ್ತಿಗಳ ನಿಖರ ಬೆಲೆಯು ಮುಂಬರುವ ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಹೊಸ ವಿನ್ಯಾಸ ತತ್ವ
ವಿನ್ಯಾಸ ಹಾಗೂ ತಂತ್ರಜ್ಞಾನದ ವಿಚಾರದಲ್ಲಿ ಟೊಯೊಟಾ ಇ-ಬೆಲ್ಲಾ ತನ್ನದೆ ಆದ ‘ಅರ್ಬನ್ ಟೆಕ್’ ವಿನ್ಯಾಸದ ತತ್ವವನ್ನು ಅಳವಡಿಸಿಕೊಂಡಿದೆ. ಮಾರುತಿ ಇ-ವಿಟಾರಾ ಕಾರಿಗಿಂತ ಭಿನ್ನವಾಗಿ ಕಾಣಲು ಮುಂಭಾಗದಲ್ಲಿ ಹ್ಯಾಮರ್ ಹೆಡ್ ಶೈಲಿಯ ವಿನ್ಯಾಸ, ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಗ್ಲಾಸ್ ಬ್ಲಾಕ್ ಇವಿ ಗ್ರಿಲ್ ಹಾಗೂ ಪಿಕ್ಸೆಲ್ ಶೈಲಿಯ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಅಳವಡಿಸಲಾಗಿದೆ. ವಾಹನದ ಪಕ್ಕದ ವಿನ್ಯಾಸವು ಬಹುಪಾಲು ಇ-ವಿಟಾರಾವನ್ನೇ ಹೋಲುತ್ತದೆಯಾದರೂ, 18 ಇಂಚಿನ ಅಲಾಯ್ ವೀಲ್‌ಗಳು ಮತ್ತು ಕೂಪೆ ಮಾದರಿಯ ರೂಫ್‌ಲೈನ್ ವಾಹನಕ್ಕೆ ಆಕರ್ಷಕ ಕ್ರೀಡಾ ಸ್ಪರ್ಶವನ್ನು ನೀಡಿವೆ. ಒಳಾಂಗಣ ವಿನ್ಯಾಸದಲ್ಲಿ ಮಾರುತಿ ಕಾರಿನ ಛಾಯೆ ಇದ್ದರೂ, ಟೊಯೊಟಾ ತನ್ನ ಕಾರಿನಲ್ಲಿ ಕಪ್ಪು ಮತ್ತು ಟ್ಯಾನ್ ಬಣ್ಣದ ಡ್ಯುಯಲ್-ಟೋನ್ ಥೀಮ್ ಬಳಸುವ ಮೂಲಕ ಒಳಾಂಗಣವನ್ನು ಮತ್ತಷ್ಟು ಪ್ರೀಮಿಯಂ ಆಗಿಸಿದೆ.
10.25 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.1 ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಜೆಬಿಎಲ್ ಪ್ರೀಮಿಯಂ ಆಡಿಯೋ, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಪನೋರಮಿಕ್ ಗ್ಲಾಸ್ ರೂಫ್, 360-ಡಿಗ್ರಿ ಕ್ಯಾಮೆರಾ ಹಾಗೂ ಎಡಿಎಎಸ್ (ADAS) ಸುರಕ್ಷತಾ ತಂತ್ರಜ್ಞಾನದಂತಹ ಅತ್ಯಾಧುನಿಕ ಫೀಚರ್‌ಗಳನ್ನು ಈ ಎಸ್‌ಯುವಿ ಒಳಗೊಂಡಿದೆ.
ಎರಡು ಬ್ಯಾಟರಿ ಆಯ್ಕೆ
ಸುಜುಕಿ, ಟೊಯೊಟಾ ಹಾಗೂ ಡೈಹತ್ಸು ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ‘ಹಾರ್ಟೆಕ್ಟ್-ಇ’ (Heartect-e) ಪ್ಲಾಟ್‌ಫಾರ್ಮ್ ಆಧಾರದ ಮೇಲೆ ಇ-ಬೆಲ್ಲಾ ಕಾರನ್ನು ನಿರ್ಮಿಸಲಾಗಿದೆ. ಗ್ರಾಹಕರಿಗೆ ಒಟ್ಟು ಎರಡು ಬ್ಯಾಟರಿ ಆಯ್ಕೆಗಳನ್ನು ಒದಗಿಸಲಾಗುತ್ತಿದ್ದು, 49 ಕಿಲೋವ್ಯಾಟ್ ಹಾಗೂ 61.1 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿಗಳು ಲಭ್ಯವಿವೆ. ಇ1 ಮಾದರಿಯಲ್ಲಿ ಚಿಕ್ಕ ಬ್ಯಾಟರಿ ಇದ್ದರೆ, ಇ2 ಮತ್ತು ಇ3 ಮಾದರಿಗಳು ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರಲಿವೆ. ಸಣ್ಣ ಬ್ಯಾಟರಿಯು 142 ಅಶ್ವಶಕ್ತಿ ಉತ್ಪಾದಿಸಿದರೆ, ದೊಡ್ಡ ಬ್ಯಾಟರಿಯು 172 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎರಡೂ ಮಾದರಿಗಳು 189 ನ್ಯೂಟನ್-ಮೀಟರ್ ಟಾರ್ಕ್ ಒದಗಿಸಲಿವೆ. 61.1 ಕಿಲೋವ್ಯಾಟ್ ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ ಬರೋಬ್ಬರಿ 543 ಕಿಲೋಮೀಟರ್ ರೇಂಜ್ ಸಿಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕೇವಲ 45 ನಿಮಿಷಗಳಲ್ಲಿ ಶೇಕಡಾ 10ರಿಂದ 80ರಷ್ಟು ವೇಗವಾಗಿ ಚಾರ್ಜ್ ಆಗುವ ತಂತ್ರಜ್ಞಾನವಿದ್ದು, ಬ್ಯಾಟರಿಯ ಮೇಲೆ ಕಂಪನಿಯು ಎಂಟು ವರ್ಷಗಳ ಸುದೀರ್ಘ ವಾರಂಟಿಯನ್ನು ನೀಡುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ನೂತನ ಎಸ್‌ಯುವಿಯು ಹ್ಯುಂಡೈ ಕ್ರೆಟಾ ಇವಿ, ಮಹೀಂದ್ರ ಬಿಇ6, ಟಾಟಾ ಕರ್ವ್ ಇವಿ, ಎಂಜಿ ವಿಂಡ್ಸರ್ ಇವಿ ಹಾಗೂ ಮುಂಬರುವ ಟಾಟಾ ಸಿಯೆರಾ ಇವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡಲು ಸಜ್ಜಾಗಿದೆ.
ಇದನ್ನೂ ಓದಿ : ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ ರೆನಾಲ್ಟ್, ನಿಸ್ಸಾನ್ ಕಂಪನಿಯ ನಾಲ್ಕು ಹೊಸ SUV ಕಾರುಗಳು



















