ಚೆನ್ನೈ : ಕಾಲಿವುಡ್ ಚಿತ್ರರಂಗದಲ್ಲಿ ಭಾರೀ ಸುದ್ದಿಯಾಗುತ್ತಿರುವ ಮತ್ತು ಅತಿ ಹೆಚ್ಚು ಕುತೂಹಲ ಮೂಡಿಸಿರುವ, ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ ‘ಜನನಾಯಗನ್’ ಬಿಡುಗಡೆ ತಡವಾಗುತ್ತಿರುವುದರ ಬಗ್ಗೆ ನಿರ್ದೇಶಕ ಹೆಚ್. ವಿನೋತ್ ಅತ್ಯಂತ ನಿಗೂಢ ಹಾಗೂ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಇತ್ತೀಚಿನ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಚಿತ್ರದ ರಿಲೀಸ್ ಡೇಟ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತೆರೆಮರೆಯಲ್ಲಿ ನಡೆದಿರುವ ಅಸಲಿ ಸತ್ಯವನ್ನು ಬಿಚ್ಚಿಡಲು ನನಗೆ ಧೈರ್ಯ ಸಾಲುತ್ತಿಲ್ಲ ಎಂದು ಹೇಳುವ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದಾರೆ.
ನಿರ್ದೇಶಕ ಪಾಂಡಿರಾಜ್ ಅವರ ಮುಂಬರುವ ‘ಪರಿಮಳ ಅಂಡ್ ಕೋ’ ಚಿತ್ರದ ಪ್ರಚಾರದ ಭಾಗವಾಗಿ ಆಯೋಜಿಸಲಾಗಿದ್ದ ಸಂವಾದದಲ್ಲಿ ಹೆಚ್. ವಿನೋತ್ ಪಾಲ್ಗೊಂಡಿದ್ದರು. ಈ ವೇಳೆ ಕಾರ್ಯಕ್ರಮದ ನಿರೂಪಕರು, “ಇಡೀ ತಮಿಳುನಾಡು ಕಾಯುತ್ತಿರುವ ಪ್ರಶ್ನೆಯನ್ನು ನಾನು ಕೇಳುತ್ತಿದ್ದೇನೆ, ಜನನಾಯಗನ್ ಯಾವಾಗ ಬಿಡುಗಡೆಯಾಗುತ್ತದೆ?” ಎಂದು ಪ್ರಶ್ನಿಸಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ವಿನೋತ್, “ಸಿನಿಮಾ ಬಿಡುಗಡೆ ಮಾಡುವುದು ನನ್ನ ಕೈಯಲ್ಲಿಲ್ಲ. ಅದರ ಹಿಂದಿರುವ ನಿಜವಾದ ಕಾರಣವನ್ನು ನಿಮಗೆ ಹೇಳಲು ನನಗೆ ಧೈರ್ಯವಿಲ್ಲ. ಒಂದು ವೇಳೆ ನಾನು ಧೈರ್ಯ ಮಾಡಿ ಹೇಳಿದರೂ, ಅದನ್ನು ಜನರೊಂದಿಗೆ ಹಂಚಿಕೊಳ್ಳುವ ಧೈರ್ಯ ನಿಮಗಿರುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು. ಈ ಹೇಳಿಕೆಯು ಚಿತ್ರದ ವಿಳಂಬದ ಹಿಂದೆ ದೊಡ್ಡ ರಾಜಕೀಯ ಅಥವಾ ಸೆನ್ಸಾರ್ ಮಂಡಳಿಯ ಒತ್ತಡಗಳಿರುವ ಮುನ್ಸೂಚನೆಯನ್ನು ನೀಡಿದೆ.
5 ತಿಂಗಳಿಂದ ಸಿಗದ ಸೆನ್ಸಾರ್ ಪ್ರಮಾಣಪತ್ರ
ಮುಖ್ಯಮಂತ್ರಿ ವಿಜಯ್, ಮಮಿತಾ ಬೈಜು, ಬಾಬಿ ಡಿಯೋಲ್ ಮತ್ತು ಪೂಜಾ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಕಳೆದ 5 ತಿಂಗಳಿಂದ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಯಿಂದ ಸೆನ್ಸಾರ್ ಪ್ರಮಾಣಪತ್ರ ಪಡೆಯಲು ಕಾಯುತ್ತಿದೆ. ವಾಸ್ತವವಾಗಿ, ಈ ವರ್ಷದ ಜನವರಿಯಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ, ಅಂದರೆ ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳ ಮುಂಚಿತವಾಗಿ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯ ಪರಿಶೀಲನಾ ಸಮಿತಿಯ ಸದಸ್ಯರೊಬ್ಬರು ಆಕ್ಷೇಪಣೆ ಎತ್ತಿದ ಕಾರಣ, ಚಿತ್ರವನ್ನು ಪರಿಷ್ಕರಣಾ ಸಮಿತಿಗೆ (ರಿವೈಸಿಂಗ್ ಕಮಿಟಿ) ಕಳುಹಿಸಲಾಯಿತು. ಇದರಿಂದಾಗಿ ಚಿತ್ರದ ಬಿಡುಗಡೆ ನನೆಗುದಿಗೆ ಬಿದ್ದಿದೆ.
ವಿಜಯ್ ಹುಟ್ಟುಹಬ್ಬದ ನಿರೀಕ್ಷೆ
ಚಿತ್ರದ ವಿಳಂಬದ ಬಗ್ಗೆ ತಮಿಳುನಾಡು ಚಲನಚಿತ್ರ ತಂತ್ರಜ್ಞಾನ ಸಚಿವ ರಾಜ್‌ಮೋಹನ್ ಆರ್ಮುಗಂ ಇತ್ತೀಚೆಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರವಷ್ಟೇ ಸಿನಿಮಾ ಬಿಡುಗಡೆಗೆ ಅವಕಾಶ ಸಿಗಲಿದೆ. ಯಾವುದೇ ರಾಜಕೀಯ ಕಾರಣಗಳಿಗಾಗಿ ಸಿನಿಮಾವನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಚಿತ್ರದ ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅವರು ಸೆನ್ಸಾರ್ ಮಂಡಳಿಯ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರಾದರೂ ಇನ್ನೂ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಮಧ್ಯೆ, ಏಪ್ರಿಲ್ ತಿಂಗಳಲ್ಲಿ ಚಿತ್ರದ ಕೆಲವು ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿ ಆತಂಕ ಮೂಡಿಸಿದ್ದವು.
ಪ್ರಸ್ತುತ ಬುಕ್‌ಮೈಶೋ ಸೇರಿದಂತೆ ಕೆಲವು ಆನ್‌ಲೈನ್ ಟಿಕೆಟಿಂಗ್ ಆಪ್‌ಗಳಲ್ಲಿ ಸಿನಿಮಾ ಜೂನ್ 19 ರಂದು ಬಿಡುಗಡೆಯಾಗಬಹುದು ಎಂದು ತೋರಿಸಲಾಗುತ್ತಿದೆ. ಹೀಗಾಗಿ ಜೂನ್ 22 ರಂದು ಬರಲಿರುವ ನಟ ವಿಜಯ್ ಅವರ 52 ನೇ ಜನ್ಮದಿನದ ಕಾಣಿಕೆಯಾಗಿ ‘ಜನನಾಯಗನ್’ ಥಿಯೇಟರ್‌ಗಳಿಗೆ ಲಗ್ಗೆ ಇಡಬಹುದು ಎಂಬ ಬಲವಾದ ಆಶಯದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ ; ಅಭಿಷೇಕ್ ಬ್ಯಾನರ್ಜಿ ಬೆನ್ನಲ್ಲೇ TMC ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೂ ಹಲ್ಲೆ!



















