ಬೆಂಗಳೂರು : ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಾನರ್ ಸಂಸ್ಥೆಯು ತನ್ನ ಅತ್ಯಾಧುನಿಕ ‘ಹಾನರ್ ವಿನ್ ಟರ್ಬೊ’ (Honor Win Turbo) ಸ್ಮಾರ್ಟ್‌ಫೋನ್ ಅನ್ನು ಚೀನಾ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬರೋಬ್ಬರಿ 10,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ ಹಾಗೂ ಅತ್ಯಾಧುನಿಕ ಮೀಡಿಯಾಟೆಕ್ ಡೈಮೆನ್ಸಿಟಿ 8500 ರೇಸಿಂಗ್ ಎಡಿಷನ್ ಪ್ರೊಸೆಸರ್ ಅನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ತಾಂತ್ರಿಕ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆಂಡ್ರಾಯ್ಡ್ 16 ಆಧಾರಿತ ಮ್ಯಾಜಿಕ್ ಓಎಸ್ 10 (MagicOS 10) ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಈ ಫೋನ್ ಕಾರ್ಯನಿರ್ವಹಿಸುತ್ತದೆ.
ಹೊಸ ಹಾನರ್ ವಿನ್ ಟರ್ಬೊ ಸ್ಮಾರ್ಟ್‌ಫೋನ್ ಅತ್ಯುತ್ತಮ ಡಿಸ್‌ಪ್ಲೇಯನ್ನು ಹೊಂದಿದೆ. 6.79-ಇಂಚಿನ 1.5K ಅಮೋಲೆಡ್ (AMOLED) ಓಯಸಿಸ್ ಐ ಪ್ರೊಟೆಕ್ಷನ್ ಡಿಸ್‌ಪ್ಲೇ ಇದರಲ್ಲಿದ್ದು, ಇದು 120Hz ರಿಫ್ರೆಶ್ ರೇಟ್ ಹಾಗೂ ಬರೋಬ್ಬರಿ 8000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡುತ್ತದೆ. ಗೇಮಿಂಗ್ ಹಾಗೂ ವೇಗದ ಕಾರ್ಯಕ್ಷಮತೆಗಾಗಿ ಮೀಡಿಯಾಟೆಕ್ ಡೈಮೆನ್ಸಿಟಿ 8500 ರೇಸಿಂಗ್ ಎಡಿಷನ್ ಚಿಪ್‌ಸೆಟ್ ಜೊತೆಗೆ ಮಾಲಿ-G720 MC8 ಜಿಪಿಯು (GPU) ಅನ್ನು ಅಳವಡಿಸಲಾಗಿದೆ.
ವಿಶೇಷವಾಗಿ ಕಳಪೆ ನೆಟ್‌ವರ್ಕ್ ಇರುವ ಪ್ರದೇಶಗಳಾದ ಲಿಫ್ಟ್, ಬೇಸ್‌ಮೆಂಟ್ ಪಾರ್ಕಿಂಗ್ ಹಾಗೂ ರೈಲು ನಿಲ್ದಾಣಗಳಲ್ಲಿಯೂ ಅತ್ಯುತ್ತಮ ಸಿಗ್ನಲ್ ಪಡೆಯಲು ಸಹಾಯ ಮಾಡುವ ಸಿ1+ (C1+) ಆರ್‌ಎಫ್ ಎನ್‌ಹಾನ್ಸ್‌ಮೆಂಟ್ ಚಿಪ್ ಅನ್ನು ಇದರಲ್ಲಿ ನೀಡಲಾಗಿರುವುದು ಮತ್ತೊಂದು ವಿಶೇಷ. ಗರಿಷ್ಠ 16GB RAM ಹಾಗೂ 512GB ವರೆಗಿನ ಆಂತರಿಕ ಸ್ಟೋರೇಜ್ ಆಯ್ಕೆಗಳಲ್ಲಿ ಈ ಫೋನ್ ಲಭ್ಯವಿದೆ.
50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ
ಕ್ಯಾಮರಾ ವಿಚಾರಕ್ಕೆ ಬಂದರೆ, ಈ ಫೋನಿನ ಹಿಂಬದಿಯಲ್ಲಿ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮರಾ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ತಂತ್ರಜ್ಞಾನವನ್ನು ನೀಡಲಾಗಿದ್ದು, 5-ಮೆಗಾಪಿಕ್ಸೆಲ್‌ನ ವೈಡ್-ಆಂಗಲ್ ಲೆನ್ಸ್ ಅನ್ನು ಸಹ ಅಳವಡಿಸಲಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಕ್ಯಾಮರಾ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ನ ಅತ್ಯಂತ ಪ್ರಮುಖ ಆಕರ್ಷಣೆ ಎಂದರೆ ಇದರ ಬ್ಯಾಟರಿ. 10,000mAh ಸಾಮರ್ಥ್ಯದ ಬೃಹತ್ ಬ್ಯಾಟರಿಯು 80W ವೇಗದ ಚಾರ್ಜಿಂಗ್ ಹಾಗೂ 27W ರಿವರ್ಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ ಸತತ 14.2 ಗಂಟೆಗಳ ಕಾಲ ಗೇಮಿಂಗ್ ಆಡಬಹುದು ಎಂದು ಕಂಪನಿ ಭರವಸೆ ನೀಡಿದೆ. ಅಷ್ಟೇ ಅಲ್ಲದೆ ಫೋನ್ ಕಾಯ್ದುಕೊಳ್ಳಲು 40,000 ಚದರ ಎಂಎಂ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.
ಇದಲ್ಲದೆ, ಈ ಫೋನ್ ಅತ್ಯಂತ ಬಲಿಷ್ಠವಾಗಿ ವಿನ್ಯಾಸಗೊಂಡಿದ್ದು, ಐಪಿ66, ಐಪಿ68, ಐಪಿ69 ಹಾಗೂ ಐಪಿ69ಕೆ (IP69K) ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನಿಂದ ಸಂಪೂರ್ಣ ರಕ್ಷಣೆ ಪಡೆಯುತ್ತದೆ. ಜೊತೆಗೆ ಎಸ್‌ಜಿಎಸ್ (SGS) ಫೈವ್-ಸ್ಟಾರ್ ಡ್ರಾಪ್ ಹಾಗೂ ಶಾಕ್ ರೆಸಿಸ್ಟೆನ್ಸ್ (ಬೀಳುವಿಕೆ ಮತ್ತು ಆಘಾತ ನಿರೋಧಕ) ಪ್ರಮಾಣಪತ್ರವನ್ನೂ ಹೊಂದಿದೆ. ಬೆಲೆಯ ವಿಚಾರಕ್ಕೆ ಬಂದರೆ, 12GB RAM ಮತ್ತು 256GB ಸ್ಟೋರೇಜ್ ಮಾದರಿಗೆ ಚೀನಾದಲ್ಲಿ 3,299 ಯುವಾನ್ (ಭಾರತೀಯ ರೂಪಾಯಿಗಳಲ್ಲಿ ಅಂದಾಜು 46,000 ರೂ.) ನಿಗದಿಪಡಿಸಲಾಗಿದೆ. ಹಾಗೆಯೇ 12GB+512GB ಮಾದರಿಗೆ 3,599 ಯುವಾನ್ (ಅಂದಾಜು 50,000 ರೂ.) ಮತ್ತು ಟಾಪ್-ಎಂಡ್ 16GB+512GB ಮಾದರಿಗೆ 4,199 ಯುವಾನ್ (ಅಂದಾಜು 60,000 ರೂ.) ಬೆಲೆ ಹೊಂದಿದೆ. ಸದ್ಯಕ್ಕೆ ಚೀನಾದಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್‌ಫೋನ್ ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳ ಆಕರ್ಷಕ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಇದನ್ನೂ ಓದಿ : IPL ಫೈನಲ್‌ಗೆ ಕ್ಷಣಗಣನೆ : ಬೆಂಗಳೂರಲ್ಲಿ ಸಂಭ್ರಮಾಚರಣೆಗೆ ಬ್ರೇಕ್.. ಪೊಲೀಸರಿಂದ ಖಡಕ್ ಎಚ್ಚರಿಕೆ!



















