ರಾಮನಗರ: ಕಾಡಿನಿಂದ ದಾರಿ ತಪ್ಪಿ ಗ್ರಾಮಕ್ಕೆ ಬಂದ ಜಿಂಕೆಯ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಪರಿಣಾಮ ಜಿಂಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಮೆಂಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮೆಂಗಹಳ್ಳಿ ಗ್ರಾಮಕ್ಕೆ ಬಂದಿದ್ದ ಜಿಂಕೆಯನ್ನು ಕಂಡ ಬೀದಿನಾಯಿಗಳ ಗುಂಪು ಏಕಾಏಕಿ ದಾಳಿ ನಡೆಸಿದೆ. ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಜಿಂಕೆ ತಪ್ಪಿಸಿಕೊಳ್ಳಲು ಓಡಿ ಸಮೀಪದ ಪೊದೆಯೊಳಗೆ ಅವಿತು ಕುಳಿತಿತ್ತು.
ಜಿಂಕೆಯ ಸ್ಥಿತಿಯನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜಿಂಕೆಯನ್ನು ರಕ್ಷಿಸಿ ಅಗತ್ಯ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದ್ದಾರೆ.
ಕಾಡಿನಿಂದ ಆಹಾರ ಅಥವಾ ನೀರಿನ ಹುಡುಕಾಟದಲ್ಲಿ ಗ್ರಾಮ ಪ್ರದೇಶಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಜಿಂಕೆಯ ಆರೋಗ್ಯದ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿದ್ದು, ಚಿಕಿತ್ಸೆ ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡುವ ಸಾಧ್ಯತೆ ಇದೆ.



















