ನಾಂದೇಡ್ : ಸಾಮಾನ್ಯವಾಗಿ ಮದುವೆಯಂತಹ ಕಾರ್ಯಕ್ರಮಗಳಲ್ಲಿ ವರ ಹಾಗೂ ವಧುವಿನ ಕುಟುಂಬಸ್ಥರು ದುಬಾರಿ ಉಡುಗೊರೆಗಳನ್ನು ನೀಡುವುದು, ಭರ್ಜರಿ ಊಟದ ವ್ಯವಸ್ಥೆ ಮಾಡುವುದು, ಅದ್ಧೂರಿಯಾಗಿ ಕಣ್ಣುಕುಕ್ಕುವಂತೆ ಮದುವೆ ಮಾಡುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದ ವಿಶಿಷ್ಟ ಮದುವೆಯೊಂದು ಕೇವಲ ಇಬ್ಬರು ವ್ಯಕ್ತಿಗಳ ಮಿಲನವಾಗಿ ಉಳಿಯದೆ, ಇಡೀ ಗ್ರಾಮದ ಕಲ್ಯಾಣಕ್ಕೆ ಸಾಕ್ಷಿಯಾಗುವ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಪ್ರಶಂಸೆಗೆ ಪಾತ್ರವಾಗಿದೆ. ಇಲ್ಲಿನ ವರನ ಕುಟುಂಬಸ್ಥರು ತಮ್ಮ ಮದುವೆಯ ಸಂಭ್ರಮದ ನೆನಪಿಗಾಗಿ ಇಡೀ ಹಳ್ಳಿಯ ಪ್ರತಿಯೊಬ್ಬ ನಾಗರಿಕನಿಗೂ ಅಪಘಾತ ವಿಮೆ (Accident Insurance) ಮಾಡಿಸುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ.
ನಾಂದೇಡ್ ಜಿಲ್ಲೆಯ ಬಹಾದ್ದೂರಪುರ ಗ್ರಾಮದಲ್ಲಿ ಸಿದ್ದೇಶ್ವರ್ ಪೇಠ್ಕರ್ ಮತ್ತು ಮಂಜುಷಾ ಅವರ ವಿವಾಹ ಮಹೋತ್ಸವ ಇತ್ತೀಚೆಗೆ ನೆರವೇರಿತು. ಮದುವೆಯ ಸಡಗರದ ನಡುವೆಯೇ ಪೇಠ್ಕರ್ ಕುಟುಂಬವು ಅತ್ಯಂತ ವಿಭಿನ್ನ ಹಾಗೂ ಸ್ಫೂರ್ತಿದಾಯಕ ಹೆಜ್ಜೆಯೆಂಬಂತೆ, ಗ್ರಾಮದ ಸುಮಾರು 3,500 ನಿವಾಸಿಗಳಿಗೆ ಉಚಿತವಾಗಿ ಅಪಘಾತ ವಿಮಾ ರಕ್ಷಣೆಯನ್ನು ಒದಗಿಸುವ ಮೂಲಕ ಆ ಹಳ್ಳಿಯ ಪ್ರತಿಯೊಂದು ಕುಟುಂಬಕ್ಕೂ ಆಪತ್ಕಾಲದಲ್ಲಿ ಆರ್ಥಿಕ ಭದ್ರತೆ ಸಿಗುವಂತೆ ಮಾಡಿದೆ.
‘ರಿಟರ್ನ್ ಗಿಫ್ಟ್’ ರೂಪದಲ್ಲಿ ವಿಮಾ ರಕ್ಷಣೆ
ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೆ ಮತ್ತು ಹಳ್ಳಿಗರಿಗೆ ದುಬಾರಿ ವಸ್ತುಗಳನ್ನು ಕೊಡುವ ಬದಲು, ಜೀವಕ್ಕೆ ರಕ್ಷಣೆ ನೀಡುವ ಅಪಘಾತ ವಿಮೆಯನ್ನು ‘ರಿಟರ್ನ್ ಗಿಫ್ಟ್’ ಆಗಿ ನೀಡಿರುವ ಪೇಠ್ಕರ್ ಕುಟುಂಬದ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ಅಪೂರ್ವ ನಡೆಯನ್ನು ಶ್ಲಾಘಿಸಿರುವ ಶಿವಸೇನೆ ಸಂಸದ ಮಿಲಿಂದ್ ದಿಯೋರಾ ಅವರು, “ಸಾವಿರಾರು ಗ್ರಾಮಸ್ಥರಿಗೆ ಮದುವೆಯ ಉಡುಗೊರೆಯಾಗಿ ಅಪಘಾತ ವಿಮೆ ನೀಡಿರುವುದು ಅತ್ಯಂತ ಪ್ರೇರಣದಾಯಕವಾಗಿದೆ” ಎಂದು ಎಕ್ಸ್ (ಟ್ವಿಟರ್) ತಾಣದಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ, ತಾವು ಮತ್ತು ತಮ್ಮ ಪತ್ನಿ ಪೂಜಾ ಶೆಟ್ಟಿ ಕೂಡ ತಮ್ಮ ಮದುವೆಯ ಸಂದರ್ಭದಲ್ಲಿ ಇಂತಹುದೇ ಒಂದು ಜನಕಲ್ಯಾಣದ ಪ್ರಯತ್ನವನ್ನು ಮಾಡಿದ್ದನ್ನು ದಿಯೋರಾ ನೆನಪಿಸಿಕೊಂಡಿದ್ದಾರೆ. ಆಡಂಬರ ಮತ್ತು ಅತಿಯಾದ ಖರ್ಚು ವೆಚ್ಚಗಳಿಗಿಂತ ಇಂತಹ ಕರುಣೆ ಹಾಗೂ ಸಾಮಾಜಿಕ ಕಾಳಜಿಯನ್ನು ಆಯ್ಕೆ ಮಾಡಿಕೊಳ್ಳುವ ಭಾರತದ ಇಂದಿನ ಯುವ ಪೀಳಿಗೆಗೆ ಮತ್ತಷ್ಟು ಶಕ್ತಿ ಸಿಗಲಿ ಎಂದು ಅವರು ಹಾರೈಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆ
ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ವರನ ಕುಟುಂಬದ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಇಂದಿನ ‘ರೀಲ್ಸ್’ ಜಮಾನಾದಲ್ಲಿ ಪ್ರತಿಯೊಂದು ಸಣ್ಣ ಕೆಲಸವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಬಳಸಿಕೊಳ್ಳುವವರ ಮಧ್ಯೆ, “ಒಂದು ಕೈಯ್ಯಲ್ಲಿ ದಾನ ಮಾಡಿದ್ದು ಮತ್ತೊಂದು ಕೈಗೆ ಗೊತ್ತಾಗಬಾರದು” ಎಂಬ ಮಾತಿನಂತೆ ನಡೆದ ವರನಿಗೆ ನೆಟ್ಟಿಗರು ಜೈ ಎಂದಿದ್ದಾರೆ.
ಇದೇ ವೇಳೆ, ಹಳ್ಳಿಯ ಜನರಿಗೆ ಮೂಲಭೂತವಾಗಿ ಸಿಗಬೇಕಾದ ಇಂತಹ ಸೌಲಭ್ಯಗಳನ್ನು ಸರ್ಕಾರಗಳು ಮಾಡಬೇಕಿತ್ತು ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. “ಸಾಮಾನ್ಯ ನಾಗರಿಕನೊಬ್ಬ ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡಿದ್ದಾನೆ” ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು “ಸರ್ಕಾರಗಳು ಭರವಸೆ ನೀಡಿ ಮರೆತ ಕೆಲಸವನ್ನು ಮಾಡಲು ಇಂದು ನಮಗೆ ಇಂತಹ ಮದುವೆಗಳ ಅಗತ್ಯ ಬೀಳುತ್ತಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ, ಪೇಠ್ಕರ್ ಕುಟುಂಬದ ಈ ಅಪರೂಪದ ಕೊಡುಗೆಯು ಕೇವಲ ಬಹಾದ್ದೂರಪುರ ಗ್ರಾಮಕ್ಕೆ ಮಾತ್ರವಲ್ಲದೆ ಇಡೀ ದೇಶದ ವಿವಾಹ ಸಂಸ್ಕೃತಿಗೆ ಹೊಸ ಮಾದರಿಯನ್ನು ಹಾಕಿಕೊಟ್ಟಿದೆ.
ಇದನ್ನೂ ಓದಿ : ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್!



















