ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಳೆದ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದ್ದು ಅವಾಂತರ ಸೃಷ್ಟಿಯಾಗಿದೆ.
ಬಿರುಗಾಳಿಯ ಪರಿಣಾಮ ಪಟ್ಟಣದ ಐಬಿ ರಸ್ತೆಯಲ್ಲಿದ್ದ ಬೃಹತ್ ಮರ ರಸ್ತೆ ಮೇಲೆ ಉರುಳಿ ಬಿದ್ದಿದೆ. ಇದರಿಂದ ಐನಾಪುರ ರಸ್ತೆ ಸಂಪೂರ್ಣ ಬಂದ್ ಆಗಿ ಸಂಚಾರ ಸ್ಥಗಿತಗೊಂಡಿದೆ.
ಮರದ ಜೊತೆಗೆ ಎರಡು ವಿದ್ಯುತ್ ಕಂಬಗಳೂ ನೆಲಕ್ಕುರುಳಿದ್ದು, ಐಬಿ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ರಾತ್ರಿಯಿಡೀ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಮರ ಹಾಗೂ ಕಂಬಗಳು ರಸ್ತೆ ಮೇಲೆ ಬಿದ್ದ ಕಾರಣ ವಾಹನ ಸವಾರರು ಪರದಾಡುವಂತಾಗಿದ್ದು, ಸ್ಥಳೀಯರು ತಕ್ಷಣ ತೆರವು ಕಾರ್ಯಾಚರಣೆ ನಡೆಸಿ ಸಂಚಾರ ಸುಗಮಗೊಳಿಸಲು ಆಗ್ರಹಿಸಿದ್ದಾರೆ.


















