ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರೀ ಗಾಳಿ-ಮಳೆಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಲಿಂಗಸುಗೂರು ತಾಲೂಕಿನ ಪಿಕಳಿಹಾಳ ಗ್ರಾಮದ ರೈತರಾದ ಡಿ.ಬಿ. ಸೋಮನಮರಡಿ, ಗ್ಯಾನಪ್ಪ ಹಾಗೂ ಚತ್ರಪ್ಪ ಅವರ ಒಟ್ಟು 14 ಎಕರೆ ಪಪ್ಪಾಯಿ ಬೆಳೆ ಸಂಪೂರ್ಣವಾಗಿ ನೆಲಕ್ಕುರುಳಿದೆ.
ಟೆಲಿಕಾಂ ಇಲಾಖೆಯ ನಿವೃತ್ತ ಅಧಿಕಾರಿ ಡಿ.ಬಿ. ಸೋಮನಮರಡಿ ಅವರು 8 ಎಕರೆ ಜಮೀನಿನಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದು, ಬೆಳೆ ಕೈ ಸೇರುವ ಹಂತದಲ್ಲೇ ಜೋರು ಗಾಳಿ-ಮಳೆಗೆ ಸಂಪೂರ್ಣ ಹಾನಿಯಾಗಿದೆ. ಉಳಿದಂತೆ ಗ್ಯಾನಪ್ಪ ಹಾಗೂ ಚತ್ರಪ್ಪ ಅವರ 6 ಎಕರೆ ಬೆಳೆಗೂ ನಷ್ಟವಾಗಿದೆ. ಮಳೆಯಿಂದಾಗಿ ಜಮೀನುಗಳಲ್ಲಿನ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಇದೇ ವೇಳೆ ಸಿರವಾರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಭಾರೀ ಗಾಳಿಗೆ ಮರ ಉರುಳಿ ಬಿದ್ದ ಘಟನೆ ನಡೆದಿದ್ದು, ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ನಂತರ ಪಟ್ಟಣ ಪಂಚಾಯತಿ ಅಧಿಕಾರಿಗಳು ಮರ ತೆರವು ಕಾರ್ಯಾಚರಣೆಗೆ ಮುಂದಾದರು.


















