ನವದೆಹಲಿ : ಲಡಾಖ್‌ನ ಲೇಹ್ ಸಮೀಪದ ದುರ್ಗಮ ಪರ್ವತ ಪ್ರದೇಶವಾದ ತ್ಸಾಂಗ್ಸ್ತೆಯಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್‌ವೊಂದು ಪತನಗೊಂಡಿದ್ದು, ಅದರಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೇ 20ರಂದು ಈ ಭೀಕರ ಅಪಘಾತ ನಡೆದಿದ್ದು, ಇದೀಗ ಸುದ್ದಿಯನ್ನು ಸೇನಾ ಅಧಿಕಾರಿಗಳು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಇಡೀ ಹೆಲಿಕಾಪ್ಟರ್ ನುಚ್ಚು ನೂರಾಗಿದ್ದರೂ, ಅಧಿಕಾರಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಆದರೆ, ಈ ದುರ್ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಸ್ಥಳದಲ್ಲಿಯೇ ಕ್ಲಿಕ್ಕಿಸಿಕೊಂಡ ಸೆಲ್ಫಿ ಚಿತ್ರವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಸೇನೆಯ ಸಿಂಗಲ್ ಎಂಜಿನ್ ಹೊಂದಿರುವ ಚೀತಾ (Cheetah) ಹೆಲಿಕಾಪ್ಟರ್ ಅನ್ನು ಇಬ್ಬರು ಪೈಲಟ್‌ಗಳು ಅಂದರೆ ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಚಲಾಯಿಸುತ್ತಿದ್ದರು. ಈ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಕರಾಗಿ 3ನೇ ಇನ್‌ಫ್ಯಾಂಟ್ರಿ ಡಿವಿಷನ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಆಗಿರುವ ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಇದ್ದರು. ಪತನದ ತೀವ್ರತೆಗೆ ಹೆಲಿಕಾಪ್ಟರ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಲ್ಲು ಬಂಡೆಗಳ ಮಧ್ಯೆ ಬಿದ್ದಿದೆ. ಆದರೆ ಪ್ರಾಣಾಪಾಯದಿಂದ ಪಾರಾದ ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು, ಉಳಿದಿಬ್ಬರು ಗಾಯಗೊಂಡ ಅಧಿಕಾರಿಗಳೊಂದಿಗೆ ಬಂಡೆಯ ಮೇಲೆ ಕುಳಿತು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವಿಶಿಷ್ಟ ಚಿತ್ರವು ಸೇನಾ ಅಧಿಕಾರಿಗಳ ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಘಟನೆಗೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ಸೇನೆಯು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಚೀತಾ ಹೆಲಿಕಾಪ್ಟರ್‌ಗಳ ಸುರಕ್ಷತೆ ಕುರಿತು ತಲ್ಲಣ
ಇತ್ತೀಚಿನ ಈ ಅವಘಡವು ಭಾರತೀಯ ಸೇನೆಯಲ್ಲಿ ದಶಕಗಳಿಂದ ಬಳಕೆಯಲ್ಲಿರುವ ‘ಚೀತಾ’ ಹೆಲಿಕಾಪ್ಟರ್‌ಗಳ ಸುರಕ್ಷತೆಯ ಬಗ್ಗೆ ಮಗದೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 1970ರ ದಶಕದಲ್ಲಿ ಮೊದಲ ಬಾರಿಗೆ ಸೇನೆಗೆ ಸೇರ್ಪಡೆಗೊಂಡಿದ್ದ ಈ ಹೆಲಿಕಾಪ್ಟರ್‌ಗಳು, 1984ರ ‘ಆಪರೇಷನ್ ಮೇಘದೂತ್’ ಮೂಲಕ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಹಾರಾಟ ನಡೆಸುವ ಅತ್ಯುತ್ತಮ ಸಾಮರ್ಥ್ಯ ಹೊಂದಿರುವ 5 ಆಸನದ ಹೆಲಿಕಾಪ್ಟರ್ ಇದಾಗಿದ್ದರೂ, ಕಳೆದ ಕೆಲವು ವರ್ಷಗಳಿಂದ ಈ ಸರಣಿಯ ಹೆಲಿಕಾಪ್ಟರ್‌ಗಳು ನಿರಂತರವಾಗಿ ಅಪಘಾತಕ್ಕೀಡಾಗುತ್ತಿವೆ. ಈ ಹಿಂದಿನ ಹಲವು ಅವಘಡಗಳಲ್ಲಿ ಹಲವಾರು ಪೈಲಟ್‌ಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಆಧುನಿಕ ಎಲ್‌ಯುಎಚ್ (LUH) ಎಂಜಿನ್‌ನತ್ತ ಸೇನೆಯ ಚಿತ್ತ
ಚೀತಾ ಹೆಲಿಕಾಪ್ಟರ್‌ಗಳ ವಯಸ್ಸು ಮತ್ತು ತಾಂತ್ರಿಕ ಮಿತಿಗಳನ್ನು ಮನಗಂಡಿರುವ ಭಾರತೀಯ ಸೇನೆಯು, ಈ ಹಳೆಯ ಸರಣಿಯನ್ನು ಹಂತ-ಹಂತವಾಗಿ ಸೇವೆಯಿಂದ ಮುಕ್ತಗೊಳಿಸಲು ನಿರ್ಧರಿಸಿದೆ. ಇದರ ಬದಲಾಗಿ, ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆ ನಿರ್ಮಿಸುತ್ತಿರುವ ಲಘು ಹೆಲಿಕಾಪ್ಟರ್ (Light Utility Helicopter – LUH) ಅನ್ನು ಸೇನೆಗೆ ಸೇರ್ಪಡೆಗೊಳಿಸಲಾಗುತ್ತಿದೆ.
ಸೇನೆಯು ಈಗಾಗಲೇ ಸೀಮಿತ ಸರಣಿ ಉತ್ಪಾದನೆಯಡಿ ಇಂತಹ 6 ಆಧುನಿಕ ಎಲ್‌ಯುಎಚ್ ಹೆಲಿಕಾಪ್ಟರ್‌ಗಳಿಗೆ ಆರ್ಡರ್ ನೀಡಿದೆ. ಗಂಟೆಗೆ ಗರಿಷ್ಠ 220 ಕಿಲೋಮೀಟರ್ ವೇಗದಲ್ಲಿ ಚಲಿಸುವ, ಸಮುದ್ರ ಮಟ್ಟದಿಂದ 6.5 ಕಿಲೋಮೀಟರ್ ಎತ್ತರಕ್ಕೆ ಹಾರಬಲ್ಲ ಮತ್ತು 350 ಕಿಲೋಮೀಟರ್ ವ್ಯಾಪ್ತಿಯ ಕಾರ್ಯಾಚರಣಾ ಸಾಮರ್ಥ್ಯ ಹೊಂದಿರುವ ಈ ಹೊಸ ಹೆಲಿಕಾಪ್ಟರ್‌ಗಳು ಶೀಘ್ರದಲ್ಲೇ ಗಡಿ ಭಾಗದಲ್ಲಿ ಸೇನೆಯ ಶಕ್ತಿಯನ್ನು ವೃದ್ಧಿಸಲಿವೆ.
ಇದನ್ನೂ ಓದಿ : ಪಂಜಾಬ್ ಕಿಂಗ್ಸ್ ಸಾಮಾಜಿಕ ಜಾಲತಾಣದ ವಿವಾದದಿಂದ ಅಂತರ ಕಾಯ್ದುಕೊಂಡ ರಿಕಿ ಪಾಂಟಿಂಗ್!



















