ಕೋಲ್ಕತ್ತಾ : ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಕನ್ನಡಿಗ ಮನೀಶ್ ಪಾಂಡೆ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ತಂಡವು ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಮಳೆಯಿಂದಾಗಿ ಅಡಚಣೆಗೊಳಗಾದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್, ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಸುಲಭದ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ ಇನ್ನೂ 7 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 148 ರನ್ ಹೊಡೆದು ಟೂರ್ನಿಯಲ್ಲಿ 6ನೇ ಜಯ ಸಾಧಿಸಿತು.
148 ರನ್‌ಗಳ ಸುಲಭದ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡ 54 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಮನೀಶ್ ಪಾಂಡೆ ಮತ್ತು ಪೊವೆಲ್ ಜೋಡಿ ಉತ್ತಮ ಪ್ರದರ್ಶನ ನೀಡಿತು. ಈ ಜೋಡಿ 4ನೇ ವಿಕೆಟ್‌ಗೆ 48 ಎಸೆತಗಳಲ್ಲಿ ಮಹತ್ವದ 64 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹಳಿಗೆ ತಂದಿತು.
ಜವಾಬ್ದಾರಿಯುತವಾಗಿ ಆಡಿದ ಮನೀಶ್ ಪಾಂಡೆ 33 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ 45 ರನ್ ಗಳಿಸಿದ್ದಾಗ ಜಸ್ಪ್ರಿತ್ ಬುಮ್ರಾ ಎಸೆತದಲ್ಲಿ ಬೌಲ್ಡ್ ಆದರು. ಉತ್ತಮವಾಗಿ ಆಡುತ್ತಿದ್ದ ಪೊವೆಲ್ 40 ರನ್(30 ಎಸೆತ, 4 ಬೌಂಡರಿ, 2 ಸಿಕ್ಸ್) ಹೊಡೆದು ಕಾರ್ಬಿನ್ ಬಾಷ್ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಔಟಾದರು. ಕೊನೆಯಲ್ಲಿ ತೇಜಸ್ವಿ ದಹಿಯಾ 11 ರನ್, ರಿಂಕು ಸಿಂಗ್ ಔಟಾಗದೇ 9 ರನ್, ಅನುಕುಲ್ ರಾಯ್ ಔಟಾಗದೇ 4 ರನ್ ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.
ಇದನ್ನೂ ಓದಿ : IPL ಹಣ, ದಿಢೀರ್ ಜನಪ್ರಿಯತೆಯ ಬೆನ್ನೇರಬೇಡಿ : ಯುವ ಕ್ರಿಕೆಟಿಗರಿಗೆ ಕೊಹ್ಲಿ ಕಿವಿಮಾತು



















