ಚೆನ್ನೈ : ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ನಿರ್ಣಾಯಕ ಹಾಗೂ ಈ ಆವೃತ್ತಿಯ ಅಂತಿಮ ತವರು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೆಚ್ಚಿನ ಆಟಗಾರ ಎಂ.ಎಸ್. ಧೋನಿ ಕಣಕ್ಕಿಳಿದಿಲ್ಲ. ಮೀನಖಂಡದ (ಕ್ಯಾಫ್) ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು ಇನ್ನೂ ಸಂಪೂರ್ಣ ಫಿಟ್ ಆಗಿಲ್ಲದ ಕಾರಣ ಈ ಪಂದ್ಯದಿಂದಲೂ ಹೊರಗುಳಿಯಬೇಕಾಯಿತು.
ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದ ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ಈವರೆಗೂ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಆದಾಗ್ಯೂ, ಅವರು ತಂಡದೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದ್ದು ನೆಚ್ಚಿನ ‘ತಲ’ನನ್ನು ಕಣ್ತುಂಬಿಕೊಳ್ಳಲು ಕಾದಿದ್ದ ಅಭಿಮಾನಿಗಳಿಗೆ ಕೊಂಚ ಸಮಾಧಾನ ತಂದಿದೆ.
ನಿವೃತ್ತಿ ವದಂತಿಗಳಿಗೆ ಬ್ರೇಕ್ ಹಾಕಿದ ನಾಯಕ ರುತುರಾಜ್
ಪಂದ್ಯದ ಟಾಸ್ ಪ್ರಕ್ರಿಯೆಯ ವೇಳೆ ಮಾತನಾಡಿದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್, ಧೋನಿ ಅವರ ನಿವೃತ್ತಿಯ ಕುರಿತು ಹಬ್ಬಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. “ಧೋನಿ ನಮ್ಮೊಂದಿಗಿರುವುದು ಸಂತಸದ ವಿಚಾರ, ಆದರೆ ಅವರು ಈ ಪಂದ್ಯದಲ್ಲಿ ಆಡುವಷ್ಟು ಫಿಟ್ ಆಗಿಲ್ಲ. ನಾವು ಈ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದ್ದೇವೆ.
ಎಲ್ಲವೂ ಅಂದುಕೊಂಡಂತೆ ಆದರೆ ಕೊನೆಯ ಲೀಗ್ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ” ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಪಂದ್ಯಕ್ಕೂ ಮುನ್ನ ಧೋನಿ ನೆಟ್ಸ್‌ನಲ್ಲಿ ಲಘು ಅಭ್ಯಾಸ ನಡೆಸಿದ್ದರಿಂದ, ತವರಿನ ಕ್ರೀಡಾಂಗಣದಲ್ಲಿ ಅವರು ಕಣಕ್ಕಿಳಿಯಬಹುದು ಎಂಬ ನಿರೀಕ್ಷೆ ದಟ್ಟವಾಗಿತ್ತು. ಧೋನಿಯವರ ಈ ಅಲಭ್ಯತೆ ಅವರ ಭವಿಷ್ಯದ ಐಪಿಎಲ್ ಪಯಣದ ಬಗ್ಗೆ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ : ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ ; ಬೆಂಗಳೂರಿನಲ್ಲಿ ಎಷ್ಟಾಗಿದೆ ಗೊತ್ತಾ?


















