ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಘೋಷಿಸಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ತಡೆಯಲು ನಡೆದ ಮಹತ್ವದ ಸಂಧಾನ ಸಭೆ ವಿಫಲವಾಗಿದೆ. ಕಾರ್ಮಿಕ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಗಂಟೆಗಟ್ಟಲೆ ನಡೆದ ಸಭೆಯಲ್ಲೂ ಯಾವುದೇ ಸಮಾಧಾನಕರ ತೀರ್ಮಾನ ಕೈಗೊಳ್ಳಲಾಗದೆ, ಮೇ 20ರ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗುವುದು ಬಹುತೇಕ ಖಚಿತವಾಗಿದೆ. ಸಭೆಯಲ್ಲಿ ಅಧಿಕಾರಿಗಳು ಮೇ 25ರಂದು ಮತ್ತೊಮ್ಮೆ ಸಭೆ ನಡೆಸುವಂತೆ ಮನವಿ ಮಾಡಿದರೂ, ಜಂಟಿ ಕ್ರಿಯಾ ಸಮಿತಿಯ ಮುಖಂಡರು ಇದಕ್ಕೆ ಒಪ್ಪಿಲ್ಲ. “ಇಂದೇ ಸಂಜೆಯೊಳಗೆ ಸರ್ಕಾರ ಸಭೆ ಕರೆದು ಬೇಡಿಕೆ ಈಡೇರಿಕೆ ಬಗ್ಗೆ ಸ್ಪಷ್ಟ ಭರವಸೆ ನೀಡಬೇಕು” ಎಂದು ಅವರು ಪಟ್ಟು ಹಿಡಿದರು.
ಜಂಟಿ ಕ್ರಿಯಾ ಸಮಿತಿಯ ಮುಖಂಡ ವಿಜಯ್ ಭಾಸ್ಕರ್ ಮಾತನಾಡಿ, “ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ವಿವರಿಸಿದ್ದೇವೆ. ಹತ್ತನೇ ತರಗತಿ ಪರೀಕ್ಷೆ ನಡೆಯುತ್ತಿರುವ ಕಾರಣ ಮುಷ್ಕರ ಮುಂದೂಡಲು ಮನವಿ ಮಾಡಿದರು. ಆದರೆ ನಾವು ಅದಕ್ಕೆ ಒಪ್ಪಿಲ್ಲ. 2012ರಲ್ಲೂ ಮಧ್ಯರಾತ್ರಿ ತನಕ ಸಭೆ ನಡೆದಿತ್ತು. ಈಗಲೂ ಮುಖ್ಯಮಂತ್ರಿ ಜೊತೆ ಸಭೆ ನಡೆಸಲು ನಾವು ಸಿದ್ಧ,” ಎಂದರು. ಮುಂದುವರಿದು, “ಯಾವುದೇ ಕಾರಣಕ್ಕೂ ಈ ಬಾರಿ ಮುಷ್ಕರ ಹಿಂಪಡೆಯುವುದಿಲ್ಲ. ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸಿದರೆ ಮಾತ್ರ ಸಹಕರಿಸುತ್ತೇವೆ,” ಎಂದು ಎಚ್ಚರಿಕೆ ನೀಡಿದರು.
“ಸಿಎಂ ಜೊತೆ ಸಭೆ ನಡೆಸಲಿ” – ನೌಕರರ ಆಗ್ರಹ:
ಸಾರಿಗೆ ಸಚಿವರ ನೇತೃತ್ವದಲ್ಲಿಯೇ ಸಭೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸರ್ಕಾರದಿಂದ ತಕ್ಷಣ ಸ್ಪಂದನೆ ಸಿಗದಿದ್ದರೆ ಮುಷ್ಕರ ಅನಿವಾರ್ಯ ಎಂದು ನೌಕರ ಸಂಘಟನೆಗಳು ಸ್ಪಷ್ಟಪಡಿಸಿವೆ. ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್ ಕುರಿತು ಪ್ರತಿಕ್ರಿಯಿಸಿದ ವಿಜಯ್ ಭಾಸ್ಕರ್,
“ಕೋರ್ಟ್ ಏನು ಹೇಳುತ್ತದೆ ನೋಡೋಣ. ಆದರೆ ನಮ್ಮ ಹೋರಾಟ ನಿಲ್ಲುವುದಿಲ್ಲ,” ಎಂದು ಹೇಳಿದರು.
“25% ವೇತನವೇ ಅಂತಿಮ ಬೇಡಿಕೆ ಅಲ್ಲ” – ಮಂಜುನಾಥ್
ಜಂಟಿ ಕ್ರಿಯಾ ಸಮಿತಿಯ ಸದಸ್ಯ ಮಂಜುನಾಥ್ ಮಾತನಾಡಿ, “ಪ್ರತಿ ಬಾರಿ ಸಾರ್ವಜನಿಕರ ಹಿತದ ಮಾತು ಮಾತ್ರ ಸರ್ಕಾರ ಹೇಳುತ್ತದೆ. ಆದರೆ ಸಾರಿಗೆ ನೌಕರರ ಸಂಕಷ್ಟದ ಬಗ್ಗೆ ಯೋಚನೆ ಮಾಡುವುದಿಲ್ಲ. ವೇತನ ವಿಚಾರದಲ್ಲಿ ನಾವು ಚರ್ಚೆಗೆ ಸಿದ್ಧರಿದ್ದೇವೆ. 25 ಪ್ರತಿಶತವೇ ಅಂತಿಮ ಎಂದು ಗಟ್ಟಿಯಾಗಿ ನಿಲ್ಲುವುದಿಲ್ಲ. ಆದರೆ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಲೇಬೇಕು,” ಎಂದು ಹೇಳಿದರು.
ಮುಷ್ಕರ ತಡೆಯಲು ಸರ್ಕಾರದ ಕಠಿಣ ಕ್ರಮ
ಇನ್ನೊಂದೆಡೆ, ಮುಷ್ಕರ ಹಿನ್ನಲೆಯಲ್ಲಿ ಸರ್ಕಾರ ಮತ್ತು ಸಾರಿಗೆ ನಿಗಮಗಳು ಕಠಿಣ ಕ್ರಮ ಕೈಗೊಂಡಿವೆ. ನಾಲ್ಕೂ ಸಾರಿಗೆ ನಿಗಮಗಳ ನೌಕರರ ರಜೆ ರದ್ದು ಮಾಡಲಾಗಿದ್ದು, ಅನಿವಾರ್ಯ ಹೊರತುಪಡಿಸಿ ಯಾರಿಗೂ ರಜೆ ಇಲ್ಲ ಎಂದು ತಿಳಿಸಲಾಗಿದೆ. ಹಾಗೆಯೇ “ನೋ ವರ್ಕ್ – ನೋ ಸ್ಯಾಲರಿ” ಆದೇಶ ಜಾರಿ ಮಾಡಲಾಗಿದೆ. ಸಾರಿಗೆ ಸೇವೆಯನ್ನು ಅಗತ್ಯ ಸೇವೆಗಳ ಕಾಯ್ದೆ (ESMA) ಅಡಿಯಲ್ಲಿ ಘೋಷಣೆ ಮಾಡಲಾಗಿದ್ದು, ಕರ್ತವ್ಯಕ್ಕೆ ಗೈರು ಹಾಜರಾದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಇತ್ತ ಸರ್ಕಾರದ ಈ ಕ್ರಮಗಳ ನಡುವೆಯೂ ನೌಕರ ಸಂಘಟನೆಗಳು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿವೆ. ನಾಳೆಯಿಂದ ರಾಜ್ಯಾದ್ಯಂತ ಬಸ್ ಸಂಚಾರದ ಮೇಲೆ ಮುಷ್ಕರದ ಭಾರೀ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ : ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ ; ಬೆಂಗಳೂರಿನಲ್ಲಿ ಎಷ್ಟಾಗಿದೆ ಗೊತ್ತಾ?



















