ನವದೆಹಲಿ: ಭಾರತದ ರಕ್ಷಣಾ ಉತ್ಪಾದನಾ ವಲಯದಲ್ಲಿ ಐತಿಹಾಸಿಕ ಬದಲಾವಣೆ ಎಂಬಂತೆ, ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ಮೊದಲ ‘ಏರ್‌ಬಸ್ ಸಿ-295’ (C295) ಸೇನಾ ಸಾರಿಗೆ ವಿಮಾನವು ಹಾರಾಟಕ್ಕೆ ಸಜ್ಜಾಗಿದೆ. ಗುಜರಾತ್‌ನ ವಡೋದರಾದಲ್ಲಿರುವ ‘ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್’ (TASL) ಘಟಕದಲ್ಲಿ ಇದರ ಅಂತಿಮ ಹಂತದ ಜೋಡಣೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಇದು ಗಗನಕ್ಕೇರಲಿದೆ. ಇದುವರೆಗೆ ದೇಶದ ರಕ್ಷಣಾ ವಿಮಾನ ತಯಾರಿಕೆಯಲ್ಲಿ ಸಾರ್ವಜನಿಕ ವಲಯದ ದೈತ್ಯ ಸಂಸ್ಥೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಹೊಂದಿದ್ದ ದಶಕಗಳ ಏಕಸ್ವಾಮ್ಯವನ್ನು ಮುರಿದು, ಖಾಸಗಿ ವಲಯವು ಪೂರ್ಣ ಪ್ರಮಾಣದ ಮಿಲಿಟರಿ ವಿಮಾನ ಉತ್ಪಾದನೆಗೆ ಇಳಿದಿರುವುದಕ್ಕೆ ಇದು ಸಾಕ್ಷಿ.

ಇತ್ತೀಚೆಗಷ್ಟೇ ವಡೋದರಾದ ಟಾಟಾ ಘಟಕದ ಹ್ಯಾಂಗರ್‌ನಿಂದ ಸಿ-295 ವಿಮಾನವನ್ನು ಹೊರಗೆ ತರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ, ಭಾರತೀಯ ವಾಯುಪಡೆಯ ಉಪಮುಖ್ಯಸ್ಥರಾದ ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ವಡೋದರಾ ಘಟಕಕ್ಕೆ ಭೇಟಿ ನೀಡಿ, ತನ್ನ ಚೊಚ್ಚಲ ಹಾರಾಟಕ್ಕೆ ಸಿದ್ಧವಾಗುತ್ತಿರುವ ವಿಮಾನದ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಈ ಹಿಂದೆ, ಭಾರತದಲ್ಲೇ ತಯಾರಾಗುವ ಮೊದಲ ಸಿ-295 ವಿಮಾನವು 2026ರ ಸೆಪ್ಟೆಂಬರ್ ಒಳಗಾಗಿ ಹೊರಬರಲಿದೆ ಎಂದು ತಿಳಿಸಿದ್ದರು. ಆದರೆ ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸಿದರೆ, ಈ ಯೋಜನೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಭಾರತೀಯ ರಕ್ಷಣಾ ವಲಯದ ಗೇಮ್ ಚೇಂಜರ್
ವಾಯುಪಡೆಗೆ ಸಿ-295 ವಿಮಾನವು ನಿರ್ಣಾಯಕ ಶಕ್ತಿಯಾಗಲಿದೆ. ಇದು ಪ್ರಸ್ತುತ ವಾಯುಪಡೆಯಲ್ಲಿರುವ ಹಳೆಯ ‘ಅವ್ರೋ-748’ (Avro-748) ವಿಮಾನಗಳ ಜಾಗವನ್ನು ತುಂಬಲಿದೆ. ಸಿ-295 ವಿಮಾನದ ಹಿಂಭಾಗದಲ್ಲಿ ದೊಡ್ಡ ರಾಂಪ್ (Ramp) ಇರಲಿದ್ದು, ಇದು ಯುದ್ಧಭೂಮಿಯಲ್ಲಿ ಪ್ಯಾರಾಟ್ರೂಪರ್‌ಗಳು ಜಿಗಿಯಲು ಹಾಗೂ ಲಘು ವಾಹನಗಳು ಮತ್ತು ಸಣ್ಣ ಫಿರಂಗಿಗಳನ್ನು ವೇಗವಾಗಿ ಲೋಡ್ ಮಾಡಲು ಮತ್ತು ಅನ್‌ಲೋಡ್ ಮಾಡಲು ನೆರವಾಗುತ್ತದೆ. ಸುಮಾರು 9.5 ಟನ್ ತೂಕದ ಸರಕು ಅಥವಾ 70 ಸೈನಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ವಿಮಾನವು, ಕೇವಲ 320 ರಿಂದ 670 ಮೀಟರ್‌ನಷ್ಟು ಚಿಕ್ಕದಾದ ಮತ್ತು ಕಚ್ಚಾ ರನ್‌ವೇಗಳ ಮೇಲೆಯೂ ಸುಲಭವಾಗಿ ಇಳಿಯಬಲ್ಲದು ಮತ್ತು ಟೇಕ್-ಆಫ್ ಆಗಬಲ್ಲದು. ಇದು ಜಮ್ಮು-ಕಾಶ್ಮೀರ, ಲಡಾಖ್ ಮತ್ತು ಈಶಾನ್ಯ ಭಾರತದ ದುರ್ಗಮ ಗಡಿ ಪ್ರದೇಶಗಳಲ್ಲಿ ಭಾರತೀಯ ಸೇನೆಗೆ ಭಾರೀ ನೆರವಾಗಲಿದೆ.
ಅಮೆರಿಕ ಸೇನೆಯೂ ಬಳಸಿದ್ದ ವಿಶ್ವಾಸಾರ್ಹ ಯುದ್ಧವಿಮಾನ
ವಿಶ್ವದ 36ಕ್ಕೂ ಹೆಚ್ಚು ದೇಶಗಳು ಬಳಸುತ್ತಿರುವ ಈ ಸಿ-295 ವಿಮಾನವು ಅತ್ಯಂತ ಕಠಿಣ ಹವಾಮಾನದಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ದಾಖಲೆ ಹೊಂದಿದೆ. ಇತ್ತೀಚೆಗಷ್ಟೇ ಇರಾನ್‌ನಲ್ಲಿ ಸಿಲುಕಿದ್ದ ತನ್ನ ಪೈಲಟ್‌ಗಳನ್ನು ರಕ್ಷಿಸಲು ಅಮೆರಿಕ ವಾಯುಪಡೆಯು ಇದೇ ಮಾದರಿಯ ವಿಮಾನವನ್ನು ಅತ್ಯಂತ ಯಶಸ್ವಿಯಾಗಿ ಬಳಸಿತ್ತು. ಭಾರತೀಯ ವಾಯುಪಡೆಯಲ್ಲಿರುವ ಬೃಹತ್ ಗಾತ್ರದ ‘ಸಿ-17 ಗ್ಲೋಬ್‌ಮಾಸ್ಟರ್’ ವಿಮಾನಗಳಿಗೆ ಹೋಲಿಸಿದರೆ ಇದು ಚಿಕ್ಕದಾಗಿದ್ದರೂ, ಹಿಮಾಲಯದ ದೌಲತ್ ಬೇಗ್ ಓಲ್ಡಿ (16,700 ಅಡಿ ಎತ್ತರ), ನ್ಯೋಮಾ ಮತ್ತು ಚುಶುಲ್‌ನಂತಹ ದುರ್ಗಮ ಮುಂಚೂಣಿ ನೆಲೆಗಳಲ್ಲಿ ಕಾರ್ಯಾಚರಣೆ ನಡೆಸಲು ಈ ವಿಮಾನ ಅತ್ಯಂತ ಸೂಕ್ತವಾಗಿದೆ.
ಆತ್ಮನಿರ್ಭರ ಭಾರತಕ್ಕೆ ಬಲ
2021 ರಲ್ಲಿ ಭಾರತ ಸರ್ಕಾರವು ಸ್ಪೇನ್‌ನ ಏರ್‌ಬಸ್ ಸಂಸ್ಥೆಯೊಂದಿಗೆ 21,935 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರ ಅಡಿಯಲ್ಲಿ ಒಟ್ಟು 56 ವಿಮಾನಗಳನ್ನು ಭಾರತ ಖರೀದಿಸುತ್ತಿದ್ದು, ಜಾಗತಿಕವಾಗಿ ಸಿ-295 ವಿಮಾನಗಳ ಅತಿ ದೊಡ್ಡ ಫ್ಲೀಟ್ ಭಾರತದ ಬಳಿಯೇ ಇರಲಿದೆ. ಒಪ್ಪಂದದ ಪ್ರಕಾರ ಮೊದಲ 16 ವಿಮಾನಗಳು ಸ್ಪೇನ್‌ನಿಂದ ನೇರವಾಗಿ ಹಾರಿಬಂದಿದ್ದು, ಉಳಿದ 40 ವಿಮಾನಗಳನ್ನು ಟಾಟಾ ಸಂಸ್ಥೆಯು ಭಾರತದಲ್ಲೇ ಉತ್ಪಾದಿಸುತ್ತಿದೆ. ಇಂಜಿನ್ ಮತ್ತು ಏವಿಯಾನಿಕ್ಸ್ ಸಂಯೋಜನೆಯಿಂದ ಹಿಡಿದು ಸಂಪೂರ್ಣ ಜೋಡಣೆಯವರೆಗೆ ಎಲ್ಲವನ್ನೂ ಟಾಟಾ ಸಂಸ್ಥೆಯೇ ನಿರ್ವಹಿಸುತ್ತಿದೆ. ಈ ಯೋಜನೆಯಲ್ಲಿ ದೇಶದ 37 ಸಾರ್ವಜನಿಕ ಮತ್ತು ಖಾಸಗಿ ಪೂರೈಕೆದಾರರು ಭಾಗಿಯಾಗಿದ್ದು, ವಡೋದರಾ ಘಟಕವೊಂದರಲ್ಲೇ ಸುಮಾರು 3,000 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಮೂಲಕ ಭಾರತವು ರಕ್ಷಣಾ ಸಾಮಗ್ರಿಗಳ ಆಮದು ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವುದಲ್ಲದೆ, ಭವಿಷ್ಯದಲ್ಲಿ ಜಾಗತಿಕ ರಕ್ಷಣಾ ಮಾರುಕಟ್ಟೆಗೆ ವಿಮಾನಗಳನ್ನು ರಫ್ತು ಮಾಡುವ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತಿದೆ.



















