ಚೆನ್ನೈ : ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ (NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಈ ಪರೀಕ್ಷಾ ಪದ್ಧತಿಯನ್ನೇ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲಿ ಪದೇ ಪದೇ ಕಂಡುಬರುತ್ತಿರುವ ಲೋಪದೋಷಗಳು ಮತ್ತು ಮೂಲಭೂತ ದೋಷಗಳಿಗೆ ಈ ಪತ್ರಿಕೆ ಸೋರಿಕೆ ಪ್ರಕರಣವೇ ಸಾಕ್ಷಿ ಎಂದು ಅವರು ಕಿಡಿಕಾರಿದ್ದಾರೆ.
ವ್ಯವಸ್ಥಿತ ಲೋಪಗಳ ವಿರುದ್ಧ ಆಕ್ರೋಶ
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಈ ಕುರಿತು ಸುದೀರ್ಘ ಹೇಳಿಕೆ ನೀಡಿರುವ ಮುಖ್ಯಮಂತ್ರಿ ವಿಜಯ್, “ನೀಟ್ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿರುವುದು ಇದು ಮೊದಲೇನೂ ಅಲ್ಲ. 2024 ರಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ತನಿಖೆಗಾಗಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಸಮಿತಿ ರಚಿಸಿ 95 ಶಿಫಾರಸುಗಳನ್ನು ಪಡೆಯಲಾಗಿತ್ತು. ಆದರೂ, ಕೇವಲ ಎರಡೇ ವರ್ಷದಲ್ಲಿ ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದಾಗಿರುವುದು ಈ ಪರೀಕ್ಷಾ ಮಂಡಳಿಯ ಅಸಾಮರ್ಥ್ಯವನ್ನು ತೋರಿಸುತ್ತದೆ,” ಎಂದು ಟೀಕಿಸಿದ್ದಾರೆ.
ಗ್ರಾಮೀಣ, ಬಡ ವಿದ್ಯಾರ್ಥಿಗಳಿಗೆ ಅನ್ಯಾಯ
ನೀಟ್ ಪರೀಕ್ಷೆಯು ಮೊದಲಿನಿಂದಲೂ ಶ್ರೀಮಂತ, ನಗರ ಪ್ರದೇಶದ ಮತ್ತು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ ಎಂಬುದು ತಮಿಳುನಾಡು ಸರ್ಕಾರದ ಪ್ರಬಲ ವಾದವಾಗಿದೆ. “ಈ ಪರೀಕ್ಷಾ ಪದ್ಧತಿಯು ಗ್ರಾಮೀಣ ಭಾಗದ, ಸರ್ಕಾರಿ ಶಾಲೆಯ ಮತ್ತು ತಮಿಳು ಮಾಧ್ಯಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಇದು ಅನ್ಯಾಯ ಮಾಡುತ್ತಿದೆ,” ಎಂದು ವಿಜಯ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಳೆಯ ಪದ್ಧತಿಗೆ ಮರಳಲು ಬೇಡಿಕೆ
ಯುಪಿಎ ಸರ್ಕಾರದ ಅವಧಿಯಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ತಮಿಳುನಾಡಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಂದ ವಿನಾಯಿತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ 12ನೇ ತರಗತಿಯ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡುವ ಮೂಲಕ ವಿದ್ಯಾರ್ಥಿಗಳ ನಿರಂತರ ಶೈಕ್ಷಣಿಕ ಸಾಧನೆಯನ್ನು ಗೌರವಿಸಲಾಗುತ್ತಿತ್ತು. ಅದೇ ಮಾದರಿಯನ್ನು ಮತ್ತೆ ಜಾರಿಗೆ ತರಬೇಕು ಎಂಬುದು ರಾಜ್ಯದ ಆಗ್ರಹವಾಗಿದೆ. ಎಂಬಿಬಿಎಸ್ (MBBS), ಬಿಡಿಎಸ್ (BDS) ಮತ್ತು ಆಯುಷ್ (AYUSH) ಕೋರ್ಸ್‌ಗಳ ಸೀಟುಗಳನ್ನು ಪಿಯುಸಿ ಅಂಕಗಳ ಆಧಾರದ ಮೇಲೆ ಭರ್ತಿ ಮಾಡಲು ರಾಜ್ಯಗಳಿಗೆ ಅಧಿಕಾರ ನೀಡಬೇಕು ಎಂದು ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ತಮಿಳುನಾಡು ವಿಧಾನಸಭೆಯು ನೀಟ್ ವಿನಾಯಿತಿ ಕೋರಿ ಈಗಾಗಲೇ ಸರ್ವಾನುಮತದ ವಿಧೇಯಕವನ್ನು ಅಂಗೀಕರಿಸಿದೆ. ಆದರೆ, ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕದ ಕಾರಣ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈಗ ಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ತಮಿಳುನಾಡಿನ ಈ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಇದನ್ನೂ ಓದಿ : ಬೈಕ್‌ನಲ್ಲಿದ್ದ 1 ಲಕ್ಷ ಹಣ ದೋಚಿ ಪರಾರಿಯಾಗುವಷ್ಟರಲ್ಲಿ ಸಿಕ್ಕಿಬಿದ್ದ ಖದೀಮರು!



















