ಹಾಸನ : ಹಾಸನದ ಕುವೆಂಪುನಗರದಲ್ಲಿರುವ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಸಣ್ಣ ವಿಚಾರ ದೊಡ್ಡ ಗಲಾಟೆಗೆ ತಿರುಗಿ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಭುಜ ತಾಗಿದ ವಿಚಾರಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಮತ್ತೊಬ್ಬ ಯುವಕನ ತಲೆಗೆ ಬಲವಾಗಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿದ್ದು, ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಘಟನೆಯ ವೇಳೆ ಜಿಮ್‌ನಲ್ಲಿ ವರುಣ್, ಕೀರ್ತನ್ ಸೇರಿದಂತೆ ಹಲವರು ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಒಂದು ಬದಿಯಿಂದ ಮತ್ತೊಂದು ಬದಿಗೆ ನಡೆದುಕೊಂಡು ಹೋಗುತ್ತಿದ್ದ ಕೀರ್ತನ್ ಅವರ ಭುಜ, ವರುಣ್ ಅವರ ಭುಜಕ್ಕೆ ತಾಗಿದೆ ಎನ್ನಲಾಗಿದೆ. ಅಷ್ಟರಲ್ಲೇ ವರುಣ್ ಕೋಪಗೊಂಡು ಕೀರ್ತನ್ ಅವರನ್ನು ಕರೆದು ಜಗಳ ಆರಂಭಿಸಿದ್ದಾನೆ ಎಂದು ತಿಳಿದುಬಂದಿದೆ.
ಭುಜ ತಾಗಿದ ಸಣ್ಣ ವಿಚಾರಕ್ಕೆ ವರುಣ್ ಏಕಾಏಕಿ ಕೀರ್ತನ್ ತಲೆ ಭಾಗಕ್ಕೆ ಕೈಯಿಂದ ಬಲವಾಗಿ ಹೊಡೆದಿದ್ದಾನೆ. ಹಲ್ಲೆಯ ತೀವ್ರತೆಗೆ ಕೀರ್ತನ್ ಸ್ಥಳದಲ್ಲೇ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಜಿಮ್‌ನಲ್ಲಿದ್ದ ಇತರರು ಕೂಡಲೇ ಮಧ್ಯಪ್ರವೇಶಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಕೀರ್ತನ್ ಅವರ ತಲೆಯ ಒಂದು ಭಾಗದಲ್ಲಿ ಮೂಳೆ ಮುರಿತವಾಗಿರುವುದು ದೃಢಪಟ್ಟಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವುದಾಗಿ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಣ್ಣ ಕಾರಣಕ್ಕೆ ನಡೆದ ಈ ಹಲ್ಲೆ ಇದೀಗ ಗಂಭೀರ ಪ್ರಕರಣವಾಗಿ ಮಾರ್ಪಟ್ಟಿದೆ. ಜಿಮ್‌ನೊಳಗೆ ನಡೆದ ಸಂಪೂರ್ಣ ಘಟನೆ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನಾ ಸಂಬಂಧ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಕೀರ್ತನ್ ನೀಡಿದ ದೂರಿನ ಮೇರೆಗೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್!


















