ಬೆಂಗಳೂರು : ಬೆಂಗಳೂರು ಹೊರವಲಯದ ಕೊತ್ತನೂರು ಸಮೀಪದ ನಾರಾಯಣಪುರದಲ್ಲಿ ಹೃದಯ ಕಲುಕುವ ದುರಂತ ಸಂಭವಿಸಿದೆ. ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮೃತ ಮಕ್ಕಳನ್ನು ಅರ್ಜುನ್(5) ಮತ್ತು ಆಶಾ(3) ಎಂದು ಗುರುತಿಸಲಾಗಿದೆ. ಇಬ್ಬರೂ ಮೂಲತಃ ರಾಯಚೂರು ಜಿಲ್ಲೆಯವರಾಗಿದ್ದು, ಕುಟುಂಬದ ಜೊತೆ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು.
ದುರ್ಗಪ್ಪ ಹಾಗೂ ಸಾವಿತ್ರಿ ದಂಪತಿ ಕಳೆದ ಆರು ತಿಂಗಳಿನಿಂದ ನಾರಾಯಣಪುರ ಭಾಗದಲ್ಲಿ ವಾಸವಾಗಿದ್ದರು. JCL ಎಂಬ ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈ ದಂಪತಿಗೆ ಕಂಪನಿಯ ಕಡೆಯಿಂದ ತಾತ್ಕಾಲಿಕ ಶೆಡ್ ನೀಡಲಾಗಿತ್ತು. ಅದೇ ಶೆಡ್‌ನಲ್ಲಿ ಕುಟುಂಬ ಜೀವನ ಸಾಗಿಸುತ್ತಿತ್ತು.
ಕಳೆದ ಒಂದು ವಾರದಿಂದ ದುರ್ಗಪ್ಪ ಹಾಗೂ ಸಾವಿತ್ರಿ ಶೆಡ್‌ನಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ವೇಳೆ ಪುಟ್ಟ ಮಕ್ಕಳಾದ ಅರ್ಜುನ್ ಮತ್ತು ಆಶಾ ಅಜ್ಜಿಯ ಜೊತೆ ಶೆಡ್‌ನಲ್ಲಿ ವಾಸವಾಗಿದ್ದರು. ನಿನ್ನೆ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅಜ್ಜಿ ಶೆಡ್‌ನಿಂದ ಹೊರಗೆ ಹೋಗಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದ್ದು, ಒಳಗಿದ್ದ ಮಕ್ಕಳು ಹೊರಬರಲು ಸಾಧ್ಯವಾಗದೇ ಸಿಲುಕಿಕೊಂಡಿದ್ದಾರೆ.
ಬೆಂಕಿಯ ಅವಘಡದಲ್ಲಿ ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಂದು ಮಗು ಆಶಾಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮಾರ್ಗಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೊತ್ತನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಶೆಡ್ ಮಾಲಿಕ ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಯ ಸೂಪರ್ವೈಸರ್‌ಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮಕ್ಕಳ ಮೃತದೇಹಗಳನ್ನು ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗುತ್ತದೆ. ಸದ್ಯ ಬೆಂಕಿ ಅವಘಡದ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಅಧಿಕಾರ ಹಂಚಿಕೆ ಕಿತ್ತಾಟದಲ್ಲಿದ್ದ ಸಿದ್ದು-ಡಿಕೆಗೆ ಎದುರಾಯ್ತು ಅಗ್ನಿಪರೀಕ್ಷೆ!


















