ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆತಂಕಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯದ ಕಗ್ಗಲಿಪುರ ಗ್ರಾಮದ ತಾತಗುಣಿ ಬಳಿ, ಪ್ರಧಾನಿ ಮೋದಿ ಸಂಚರಿಸುವ ರಸ್ತೆ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಪ್ರಧಾನಮಂತ್ರಿಯವರ ಆರ್ಟ್ ಆಫ್ ಲಿವಿಂಗ್ ಆಶ್ರಮ ಭೇಟಿಯ ಮಾರ್ಗದಲ್ಲಿ ಈ ಜಿಲೆಟಿನ್ ಕಡ್ಡಿಗಳು ದೊರೆತಿವೆ.
ಈ ಸಂಬಂಧ ಓರ್ವ ಶಂಕಿತ ವ್ಯಕ್ತಿಯನ್ನು (ಮಾನಸಿಕ ಅಸ್ವಸ್ಥ ಎನ್ನಲಾಗಿದೆ) ಪೊಲೀಸರು ವಶಕ್ಕೆ ಪಡೆದಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸ್ ಮತ್ತು ರಾಮನಗರ ಪೊಲೀಸರು ಜಂಟಿಯಾಗಿ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.
ಜಿಲೆಟಿನ್ ಕಡ್ಡಿಗಳು ಉದ್ದೇಶಪೂರ್ವಕವಾಗಿ ಇರಿಸಲಾಗಿದೆಯೇ ಅಥವಾ ಇದರ ಹಿಂದಿನ ಉದ್ದೇಶವೇನು ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಸದ್ಯಕ್ಕೆ, ಈ ಘಟನೆ ಆತಂಕ ಹಾಗೂ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಶಕ್ಕೆ ಪಡೆದಿರುವ ವ್ಯಕ್ತಿಯ ಹಿನ್ನೆಲೆ ಮತ್ತು ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ದೊರೆಯಬೇಕಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ NMPT ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ : 2 ಲಕ್ಷ ರೂ. ಸ್ಯಾಲರಿ


















