ನವದೆಹಲಿ : ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಏಕಕಾಲಕ್ಕೆ 900 ರೂ.ಗೂ ಅಧಿಕ ಏರಿಕೆ ಮಾಡಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿರುವಂತೆಯೇ ಇದೀಗ ದೇಶದ ವಾಹನ ಸವಾರರು ಹಾಗೂ ಸಾಮಾನ್ಯ ಜನತೆಗೆ ಶೀಘ್ರದಲ್ಲೇ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಲಕ್ಷಣಗಳು ದಟ್ಟವಾಗಿವೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಆಗಿರುವ ಭಾರಿ ಏರಿಕೆಯಿಂದಾಗಿ, ಭಾರತದಲ್ಲಿ ಮೇ 15ರೊಳಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೆಚ್ಚಳವಾಗುವ ಸಾಧ್ಯತೆಯಿದೆ. ತೈಲ ಮಾರಾಟ ಕಂಪನಿಗಳು (OMC) ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಲು ಈ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 4 ರಿಂದ 5 ರೂ. ಹೆಚ್ಚಳವಾಗುವ ನಿರೀಕ್ಷೆಯಿದ್ದು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯೂ 40 ರಿಂದ 50 ರೂ.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. 2022ರ ಬಳಿಕ ಅಂದರೆ, ಬರೋಬ್ಬರಿ ನಾಲ್ಕು ವರ್ಷಗಳ ನಂತರ ತೈಲ ಬೆಲೆಯಲ್ಲಿ ನಡೆಯುತ್ತಿರುವ ಬಹುದೊಡ್ಡ ಪರಿಷ್ಕರಣೆ ಇದಾಗಲಿದೆ.
ಕಂಪನಿಗಳಿಗೆ ತಿಂಗಳಿಗೆ 30000 ಕೋಟಿ ರೂ. ನಷ್ಟ!
ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಮಧ್ಯಪ್ರಾಚ್ಯದ ಅಸ್ಥಿರತೆಯಿಂದಾಗಿ, ಇತ್ತೀಚಿನ ವಾರಗಳಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ನಿಂದ ಬರೋಬ್ಬರಿ 126 ಡಾಲರ್‌ಗೆ ಜಿಗಿದಿದೆ. ವಿಶ್ವದ ಶೇ. 20ರಷ್ಟು ತೈಲ ಪೂರೈಕೆಯಾಗುವ ‘ಹೊರ್ಮುಜ್ ಜಲಸಂಧಿ’ಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದು ಈ ಜಾಗತಿಕ ಇಂಧನ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ.
ಈ ಬೆಲೆ ಏರಿಕೆಯ ಹೊರತಾಗಿಯೂ ಭಾರತದಲ್ಲಿ ಚಿಲ್ಲರೆ ಇಂಧನ ದರಗಳನ್ನು ಇದುವರೆಗೆ ಸ್ಥಿರವಾಗಿ ಕಾಯ್ದುಕೊಳ್ಳಲಾಗಿತ್ತು. ಪ್ರಸ್ತುತ ಸರ್ಕಾರ ಮತ್ತು ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 24 ರೂ. ಹಾಗೂ ಡೀಸೆಲ್ ಮೇಲೆ 30 ರೂ. ನಷ್ಟವನ್ನು ಭರಿಸುತ್ತಿವೆ. ಈ ಅಸಮತೋಲನದಿಂದಾಗಿ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಒಟ್ಟಾರೆಯಾಗಿ ತಿಂಗಳಿಗೆ ಸುಮಾರು 30,000 ಕೋಟಿ ರೂಪಾಯಿಗಳ ಭಾರಿ ನಷ್ಟವನ್ನು ಅನುಭವಿಸುತ್ತಿವೆ.
ನೆರೆಯ ದೇಶಗಳಿಗಿಂತ ಭಾರತದ ಸಮರ್ಥ ನಿರ್ವಹಣೆ
ಇಂಧನ ಬಿಕ್ಕಟ್ಟಿನಿಂದಾಗಿ ನೆರೆಯ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಕೆಲಸದ ದಿನಗಳನ್ನು ಕಡಿತಗೊಳಿಸಲಾಗಿದ್ದು, ಬಾಂಗ್ಲಾದೇಶದಲ್ಲಿ ಇಂಧನ ಪಡಿತರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ದಕ್ಷಿಣ ಕೊರಿಯಾದಂತಹ ದೇಶಗಳು ಬೆಲೆ ಮಿತಿ ಹೇರಿವೆ. ಆದರೆ, ಭಾರತವು ಈ ಬಿಕ್ಕಟ್ಟನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದು, ದೇಶದಲ್ಲಿ ಯಾವುದೇ ಇಂಧನ ಕೊರತೆ ಅಥವಾ ಪೆಟ್ರೋಲ್ ಬಂಕ್‌ಗಳ ಮುಂದೆ ಸರತಿ ಸಾಲುಗಳು ನಿರ್ಮಾಣವಾಗದಂತೆ ಎಚ್ಚರವಹಿಸಿದೆ.
ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ 36,000 ಟನ್‌ಗಳಿಂದ 54,000 ಟನ್‌ಗಳಿಗೆ ಹೆಚ್ಚಿಸಲಾಗಿದೆ. ಜೊತೆಗೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಮೂಲಕ ಗ್ರಾಹಕರ ಮೇಲಿನ ಹೊರೆಯನ್ನು ಸರ್ಕಾರ ತಗ್ಗಿಸಿತ್ತು. ರಷ್ಯಾ, ಅಮೆರಿಕ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಮೂಲಕ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ, ದೇಶದ ಸಂಸ್ಕರಣಾಗಾರಗಳು ಶೇ. 100ಕ್ಕೂ ಹೆಚ್ಚು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಹಣದುಬ್ಬರ ನಿಯಂತ್ರಣ ಬಹುದೊಡ್ಡ ಸವಾಲು
ಕಳೆದ ಒಂದು ದಶಕದಲ್ಲಿ ಭಾರತದ ಇಂಧನ ಮೂಲಸೌಕರ್ಯಗಳ ವಿಸ್ತರಣೆಯು ಈ ಬಿಕ್ಕಟ್ಟನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2014ರಿಂದ ಈಚೆಗೆ ಎಲ್‌ಪಿಜಿ ಟರ್ಮಿನಲ್‌ಗಳ ಸಂಖ್ಯೆ ದ್ವಿಗುಣಗೊಂಡಿದ್ದು, ಇಂಧನದಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣ ಶೇ. 1.5 ರಿಂದ ಶೇ. 20ಕ್ಕೆ ಏರಿಕೆಯಾಗಿದೆ. ಇದೀಗ ತೈಲ ಕಂಪನಿಗಳ ಆರ್ಥಿಕ ಸಂಕಷ್ಟವನ್ನು ತಪ್ಪಿಸಲು ದರ ಏರಿಕೆ ಅನಿವಾರ್ಯವಾದರೂ, ಅದು ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗದಂತೆ ನೋಡಿಕೊಳ್ಳುವ ದೊಡ್ಡ ಸವಾಲು ಸರ್ಕಾರದ ಮುಂದಿದೆ. ಪಶ್ಚಿಮ ಏಷ್ಯಾದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕೇಂದ್ರ ಸರ್ಕಾರ, ಬೆಲೆ ಏರಿಕೆಯ ಪ್ರಮಾಣ ಮತ್ತು ಸಮಯದ ಬಗ್ಗೆ ಅಳೆದು ತೂಗಿ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಇದನ್ನೂ ಓದಿ : ಕ್ಯಾಪ್ಟನ್ ಕೂಲ್ ಕಮಾಲ್ : ವೈಯಕ್ತಿಕ ಆದಾಯ ತೆರಿಗೆ ಪಾವತಿಯಲ್ಲಿ ಧೋನಿ ಮತ್ತೆ ಟಾಪ್



















