ಬೆಂಗಳುರು : ಪಶ್ಚಿಮ ನಗರ ಪಾಲಿಕೆಯಲ್ಲಿ ಸಾವಿರಾರು ಚದರ ಅಡಿ ವಿಸ್ತೀರ್ಣದ ಸ್ವತ್ತಿಗೆ ನಿಯಮ ಬಾಹಿರವಾಗಿ ‘A’ ಖಾತಾ ನೀಡಿರುವ ಕುರಿತು ಭಾರೀ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಇತ್ತೀಚೆಗೆ ಬಿಜೆಪಿ ಮುಖಂಡ ಎನ್. ಆರ್ ರಮೇಶ್ ಅವರು ಕ್ರಮಕ್ಕೆ ಆಗ್ರಹಿಸಿ ಪ.ನಗರ ಪಾಲಿಕೆಯ ಜಂಟಿ ಆಯುಕ್ತೆ ಆರತಿ ಆನಂದ್, ಉಪಆಯುಕ್ತ ಅಬ್ದುಲ್ ರಬ್, ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್ ಹಾಗೂ ಕಂದಾಯ ಪರಿವೀಕ್ಷಕ ಶಿವಕುಮಾರ್ ವಿರುದ್ಧ GBA ಮುಖ್ಯ ಆಯುಕ್ತರು, GBA ಕಂದಾಯ ಇಲಾಖೆಯ ವಿಶೇಷ ಆಯುಕ್ತರಿಗೆ ದೂರು ನೀಡಿದ್ದರು.

ಇದೀಗ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲೂ ದೂರು ದಾಖಲಾಗಿದೆ. ಈ ಮೂಲಕ ಪಶ್ಚಿಮ ನಗರ ಪಾಲಿಕೆಯ ಜಂಟಿ ಆಯುಕ್ತೆ ಆರತಿ ಆನಂದ್ ಸೇರಿ ಹಗರಣದಲ್ಲಿ ಭಾಗಿಯಾಗಿರುವ ಅಧಿಕರಿಗಳಿಗೆ ಭಾರೀ ಸಂಕಷ್ಟ ಎದುರಾಗಿದೆ. ಭ್ರಷ್ಟ ಅಧಿಕಾರಿಗಳ ವಿರುದ್ದ ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಲೋಕಾಯುಕ್ತದಲ್ಲಿ ದಾಖಲೆಗಳ ಸಮೇತ ದೂರು ನೀಡಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ದೂರಿನಲ್ಲೇನಿದೆ?
ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡಿನ ಅಥವಾ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಮಲ್ಲಸಂದ್ರ ಗ್ರಾಮದ ಸರ್ವೆ ನಂ: 18/1A4, 18/1A5, 18/146, 18/147, 18/1A8 ಮತ್ತು 18/1A9 ರ 10 ಎಕರೆ ಸ್ವತ್ತಿಗೆ ಸತೀಶ್ ಸಿ. ಜಿ. ಎಂಬುವವರ ಮಾಲೀಕತ್ವದ M/s CASAGRAND LOTUS Pvt: Ltd. ಎಂಬ ಸಂಸ್ಥೆಯ ಹೆಸರಿಗೆ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ‘A’ ಖಾತಾವನ್ನು ಮಾಡಿಕೊಟ್ಟಿದ್ದ ಮತ್ತು ಈ ಕಾರ್ಯಕ್ಕಾಗಿ 5 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಹಣವನ್ನು ಲಂಚದ ರೂಪದಲ್ಲಿ ಪಡೆದಿದ್ದ ಮಹಾ ವಂಚನೆಯ ಹಗರಣದ ಬಗ್ಗೆ ಪರಮ ಭ್ರಷ್ಟ ಅಧಿಕಾರಿ ಪಶ್ಚಿಮ ನಗರ ಪಾಲಿಕೆ ಜಂಟಿ ಆಯುಕ್ತೆ ಆರತಿ ಆನಂದ್, ಉಪ ಆಯುಕ್ತ ಅಬ್ದುಲ್ ರಬ್, ಸಹಾಯಕ ಕಂದಾಯ ಅಧಿಕಾರಿ ರಮೇಶ್ ರಾಥೋಡ್ ಮತ್ತು ಕಂದಾಯ ಪರಿವೀಕ್ಷಕ ಶಿವಕುಮಾರ್ ವಿರುದ್ಧ ದಿನಾಂಕ 11/02/2026 ರಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ, ಬಿಜೆಪಿ ಮುಖಂಡ ಎನ್.ಆರ್ ರಮೇಶ್ ದೂರುಗಳನ್ನು ದಾಖಲಿಸಿದ್ದರು.

ಈ ರೀತಿ ತಮ್ಮ ವಿರುದ್ಧ ದೂರುಗಳು ದಾಖಲಾಗುತ್ತಿದ್ದಂತೆ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರು ನೀಡಿದ್ದ ಎಚ್ಚರಿಕೆಯ ನಂತರ ಕಾನೂನು ಬಾಹಿರವಾಗಿ 4,21,577 ಚ. ಅಡಿ ಸ್ವತ್ತಿಗೆ ಮಾಡಲಾಗಿದ್ದ ‘A’ ಖಾತಾವನ್ನು ಜಂಟಿ ಆಯುಕ್ತೆ ಆರತಿ ಆನಂದ್ ಅವರು ರದ್ದು ಪಡಿಸಿದ್ದರು. ಆದರೆ, ನಂತರ ಅದೇ ಸ್ವತ್ತಿಗೆ ಹೊಂದಿಕೊಂಡಿರುವ ಸರ್ವೆ ನಂ: 18/1A10, 18/1A11 ಮತ್ತು 18/1A12ರ 6,72,550 ಚ. ಅಡಿ ವಿಸ್ತೀರ್ಣದ ಸ್ವತ್ತನ್ನೂ ಸೇರಿಸಿ ಒಟ್ಟು 10,94,127 ಚ. ಅಡಿ ವಿಸ್ತೀರ್ಣಕ್ಕೆ ಮತ್ತೆ ‘A’ ಖಾತಾ ನೀಡಲಾಗಿದೆ ಎಂದು ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ದೂರಿನಲ್ಲಿ ತಿಳಿಸಿದೆ.
ಇನ್ನು, ದೊಡ್ಡ ಮಟ್ಟದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿ ಈಗಾಗಲೇ ಹಲವಾರು ಕಾನೂನು ಬಾಹಿರ ಕಾರ್ಯಗಳನ್ನು ಮಾಡುವ ಮೂಲಕ ಸರ್ಕಾರಕ್ಕೆ ಹತ್ತಾರು ಕೋಟಿ ರೂಪಾಯಿ ನಷ್ಟ ಉಂಟು ಮಾಡಿರುವ ಆರತಿ ಆನಂದ್ ಎಂಬ ಪರಮ ಭ್ರಷ್ಟ ಅಧಿಕಾರಿ, ಈ ಮೊದಲು ‘A’ ಖಾತಾ ರದ್ದು ಪಡಿಸಿದ್ದ 4,21,577 ಚ. ಅಡಿ ವಿಸ್ತೀರ್ಣದ ಸ್ವತ್ತಿನೊಂದಿಗೆ, ಅದಕ್ಕೆ ಹೊಂದಿಕೊಂಡಿರುವ 6,72,550 ಚ. ಅಡಿ ವಿಸ್ತೀರ್ಣದ ಸ್ವತ್ತನ್ನೂ ಸೇರಿಸಿ ಒಟ್ಟು 10,94,127 ಚ. ಅಡಿ ವಿಸ್ತೀರ್ಣದ ಸ್ವತ್ತಿಗೆ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ 15/04/2026 ರಂದು ‘A’ ಖಾತಾ ಮಾಡಿಕೊಟ್ಟಿರುವ ಆಘಾತಕಾರಿ ದಾಖಲೆಗಳು ಲಭ್ಯವಾಗಿದೆ.

ಈ ಮೂಲಕ, ಪಾಲಿಕೆಗೆ ನ್ಯಾಯಯುತವಾಗಿ ಬರಬೇಕಿದ್ದ ಕೋಟ್ಯಾಂತರ ರೂಪಾಯಿಗಳಷ್ಟು ಮೊತ್ತದ ಸುಧಾರಣಾ ಶುಲ್ಕ / ಅಭಿವೃದ್ಧಿ ಶುಲ್ಕ ವಂಚನೆಯಾಗಿದೆಯಲ್ಲದೇ, ಇಷ್ಟು ಬೃಹತ್ ವಿಸ್ತೀರ್ಣದ ಸ್ವತ್ತಿಗೆ ‘A’ ಖಾತಾ ನೀಡುವ ಮುನ್ನ ಕಾನೂನು ರೀತ್ಯಾ ಅಪರ ಆಯುಕ್ತರು(ಕಂದಾಯ) ಮತ್ತು ಪಾಲಿಕೆಯ ಆಯುಕ್ತರ ಅನುಮೋದನೆ ಪಡೆದುಕೊಳ್ಳಬೇಕಿದ್ದರೂ ಸಹ ಇದ್ಯಾವುದನ್ನೂ ಮಾಡದೆಯೇ, ನೇರವಾಗಿ ತಾವೇ ‘A’ ಖಾತಾ ಮಾಡಿಕೊಟ್ಟಿದ್ದಾರೆ. ತಮ್ಮ ಈ ಕಾನೂನು ಬಾಹಿರ ಕಾರ್ಯಕ್ಕಾಗಿ ಜಂಟಿ ಆಯುಕ್ತೆ ಆರತಿ ಆನಂದ್ ಅವರು ಅಪಾರ ಮೊತ್ತದ ಹಣವನ್ನು ಅಕ್ರಮವಾಗಿ ಪಡೆದಿದ್ದು, ಇವರೊಂದಿಗೆ ಉಪ ಆಯುಕ್ತರಾದ ಅಬ್ದುಲ್ ರಬ್ ಮತ್ತು ಹೆಮ್ಮಿಗೆಪುರ ವಾರ್ಡಿನ ಕಂದಾಯ ಪರಿವೀಕ್ಷಕ ಶಿವಕುಮಾರ್ ಅವರೂ ಸಹ ಷಾಮೀಲಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದ್ದರಿಂದ ಪಾಲಿಕೆಗೆ ಬೃಹತ್ ಪ್ರಮಾಣದ ವಂಚನೆ ಮಾಡಿರುವ ಮತ್ತು ಕಾನೂನು ಬಾಹಿರ ಕಾರ್ಯ ಮಾಡಿರುವ ಆರತಿ ಆನಂದ್, ಅಬ್ದುಲ್ ರಬ್ ಮತ್ತು ಶಿವಕುಮಾರ್ ಅವರುಗಳ ವಿರುದ್ಧ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳನ್ನು ದಾಖಲಿಸಿಕೊಂಡು ಕಠಿಣ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಬೇಕೆಂದು ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿಯ ಉಪಾಧ್ಯಕ್ಷ ಗಣೇಶ್ ಸಿಂಗ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಡಾ.ರಾಜ್‌ಕುಮಾರ್ ಪುಣ್ಯಭೂಮಿಯನ್ನು ಅಭಿವೃದ್ಧಿಪಡಿಸಿ – ಸರ್ಕಾರಕ್ಕೆ ಎನ್.ಆರ್ ರಮೇಶ್ ಆಗ್ರಹ!



















