ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಪೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ತಮ್ಮ ಬೆರಳಿನ ಗಾಯದ ಹೆಚ್ಚಿನ ತಪಾಸಣೆಗಾಗಿ ತವರು ದೇಶ ಇಂಗ್ಲೆಂಡ್‌ಗೆ ಮರಳಿದ್ದಾರೆ. 2026ರ ಐಪಿಎಲ್ ಟೂರ್ನಿಯ ಪ್ರಮುಖ ಘಟ್ಟದಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಆಟಗಾರ ಸ್ಕ್ಯಾನಿಂಗ್‌ಗಾಗಿ ತವರಿಗೆ ಮರಳಿರುವುದು ಆರ್‌ಸಿಬಿ ಪಾಳಯದಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಸಾಲ್ಟ್ ಕಳೆದ ಮೂರು ಪಂದ್ಯಗಳಿಂದ ದೂರ ಉಳಿದಿದ್ದು, ಅವರ ಅಲಭ್ಯತೆಯು ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಮೇಲೆ ಗಂಭೀರ ಪರಿಣಾಮ ಬೀರಿದೆ.
ಗಾಯಗೊಂಡಿದ್ದು ಹೇಗೆ?
ಏಪ್ರಿಲ್ 18ರಂದು ತವರು ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಫಿಲ್ ಸಾಲ್ಟ್ ಗಾಯಗೊಂಡಿದ್ದರು. ಡೆಲ್ಲಿ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಬೌಂಡರಿ ಬಳಿ ಚೆಂಡನ್ನು ತಡೆಯಲು ಡೈವ್ ಮಾಡಿದಾಗ ಅವರ ಎಡಗೈ ಬೆರಳಿಗೆ ಪೆಟ್ಟಾಗಿತ್ತು. ಸಾಮಾನ್ಯ ಫೀಲ್ಡಿಂಗ್ ಪ್ರಯತ್ನದಂತಿದ್ದ ಈ ಘಟನೆ, ಇದೀಗ ಅವರು ಟೂರ್ನಿಯ ಹಲವು ಪಂದ್ಯಗಳಿಗೆ ಅಲಭ್ಯರಾಗುವಂತೆ ಮಾಡಿದೆ. ಈ ಗಾಯದ ಗಂಭೀರತೆಯನ್ನು ಅರಿತ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಹಾಗೂ ಆರ್‌ಸಿಬಿ ಫ್ರಾಂಚೈಸಿ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಹೆಚ್ಚಿನ ತಪಾಸಣೆಗಾಗಿ ಯುಕೆಗೆ ಕಳುಹಿಸಿವೆ.
ಆರ್‌ಸಿಬಿಗೆ ಸಾಲ್ಟ್ ಅಲಭ್ಯತೆಯ ಬಿಸಿ
ಪ್ರಸ್ತುತ ಆವೃತ್ತಿಯಲ್ಲಿ ಫಿಲ್ ಸಾಲ್ಟ್ ಅದ್ಭುತ ಲಯದಲ್ಲಿದ್ದರು. ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 168.33ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ 202 ರನ್ ಸಿಡಿಸಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಜೊತೆ ಜಾಕಬ್ ಬೆಥೆಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗುತ್ತಿದೆ. ಆದರೆ, ಈ ಪ್ರಯೋಗವು ಫಿಲ್ ಸಾಲ್ಟ್ ನೀಡುತ್ತಿದ್ದಂತಹ ಬಿರುಸಿನ ಆರಂಭವನ್ನು ತಂದುಕೊಟ್ಟಿಲ್ಲ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಸೋಲಿನ ಬಳಿಕ ಸದ್ಯ ಸಣ್ಣ ವಿರಾಮದಲ್ಲಿರುವ ಹಾಲಿ ಚಾಂಪಿಯನ್ ಆರ್‌ಸಿಬಿಗೆ, ಮುಂದಿನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆಗೆ ಸರಿಯಾದ ಆರಂಭಿಕ ಸಂಯೋಜನೆ ಕಂಡುಕೊಳ್ಳುವ ಬಹುದೊಡ್ಡ ಸವಾಲು ಎದುರಾಗಿದೆ.
ಮತ್ತೆ ಐಪಿಎಲ್ ಆಡಲಿದ್ದಾರೆಯೇ ಫಿಲ್ ಸಾಲ್ಟ್?
ಫಿಲ್ ಸಾಲ್ಟ್ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿಲ್ಲ ಎಂಬುದು ಸದ್ಯದ ಮಟ್ಟಿಗೆ ಸಮಾಧಾನಕರ ಸಂಗತಿ. ಸ್ಕ್ಯಾನಿಂಗ್ ವರದಿ ಬಂದ ಬಳಿಕವಷ್ಟೇ ಅವರ ಮುಂದಿನ ಭವಿಷ್ಯ ಸ್ಪಷ್ಟವಾಗಲಿದೆ. ಗಾಯ ಗುಣಮುಖವಾದರೆ ಇದೇ ತಿಂಗಳಾಂತ್ಯದಲ್ಲಿ ಅವರು ಮತ್ತೆ ಭಾರತಕ್ಕೆ ಮರಳಿ ಟೂರ್ನಿಯ ಅಂತಿಮ ಹಂತದ ಪಂದ್ಯಗಳಿಗೆ ಆರ್‌ಸಿಬಿ ಪಡೆಯನ್ನು ಸೇರಿಕೊಳ್ಳುವ ವಿಶ್ವಾಸವನ್ನು ತಂಡ ಹೊಂದಿದೆ. ಸದ್ಯಕ್ಕೆ ಬೆಥೆಲ್ ಆರಂಭಿಕರಾಗಿ ಮುಂದುವರಿಯಲಿದ್ದು, ಜೋರ್ಡಾನ್ ಕಾಕ್ಸ್ ಕೂಡ ಬ್ಯಾಕ್-ಅಪ್ ಆಯ್ಕೆಯಾಗಿ ಲಭ್ಯವಿದ್ದಾರೆ. ಒಂದು ವೇಳೆ ಗಾಯ ಗಂಭೀರವಾಗಿದ್ದರೆ ಮಾತ್ರ ಬದಲಿ ಆಟಗಾರನನ್ನು ಕರೆತರುವ ಅವಕಾಶ ಫ್ರಾಂಚೈಸಿಗೆ ಇದೆ. ಆದರೂ, ಟ್ರೋಫಿ ಉಳಿಸಿಕೊಳ್ಳುವ ಕಠಿಣ ಹೋರಾಟದಲ್ಲಿರುವ ಆರ್‌ಸಿಬಿ, ಫಿಲ್ ಸಾಲ್ಟ್ ಆದಷ್ಟು ಬೇಗ ಚೇತರಿಸಿಕೊಂಡು ಮರಳಲಿ ಎಂದು ಎದುರುನೋಡುತ್ತಿದೆ.
ಇದನ್ನೂ ಓದಿ : ಉಡುಪಿಯಲ್ಲಿ 4 ಅಡಿ ಎತ್ತರದ ಅಪರೂಪದ ಜಿಂಕೆ ಭೇಟೆಯ ವೀರಗಲ್ಲು ಪತ್ತೆ


















